ಪುತ್ತೂರು: ಪೊಲೀಸರ ಮೇಲೆ ಹಲ್ಲೆ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಮೂವರ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಪುತ್ತೂರು ಪಡ್ನೂರು ಗ್ರಾಮದ ಮುಂಡಾಜೆಯಲ್ಲಿ ನಡೆದಿದೆ.
ಪುತ್ತೂರು ಗ್ರಾಮಾಂತರ ಠಾಣೆಯ ಸಿಬ್ಬಂದಿಗಳಾದ ಹೆಡ್ ಕಾನ್ಸ್ಟೇಬಲ್ ಮಧು ಹಾಗೂ ಸಿಪಿಸಿ ಭೀಮನ ಗೌಡ ಎಂ. ಬಿರಾದರ್ ಅವರು ಸೆಪ್ಟೆಂಬರ್ 4ರ ರಾತ್ರಿ ಹೊಯ್ಸಳ ವಾಹನದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಬಂದ ದೂರಿನ ಮೇರೆಗೆ ಪಡ್ನೂರು ಗ್ರಾಮದ ಮುಂಡಾಜೆ ಪ್ರದೇಶಕ್ಕೆ ತೆರಳಿದ್ದರು.
ಸ್ಥಳಕ್ಕೆ ತಲುಪಿದ ವೇಳೆ ಮಹಿಳೆಯೊಬ್ಬರು ತನ್ನ ಪತಿ ತನಗೆ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನವೀನ್ ಎಂಬಾತನನ್ನು ಪೊಲೀಸರು ವಿಚಾರಿಸಿದಾಗ ಆತ ಕೋಪಗೊಂಡು ತನ್ನ ಪತ್ನಿಯ ಮೇಲೆ ಮತ್ತೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಈ ವೇಳೆ ಮಧ್ಯಪ್ರವೇಶಿಸಿ ತಡೆಯಲು ಮುಂದಾದ ಪೊಲೀಸ್ ಸಿಬ್ಬಂದಿಗಳೊಂದಿಗೆ ನವೀನ್, ಆತನ ತಾಯಿ ಹಾಗೂ ಸಹೋದರ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 107/2026ರಡಿ ಬಿಎನ್ಎಸ್ 2023ರ ಕಲಂ 352, 132, 121(1) ಹಾಗೂ 3(5) ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಪ್ರಮುಖ ಆರೋಪಿಯಾಗಿರುವ ನವೀನ್ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಯಿಂದ ಬಿಡುಗಡೆಯಾದ ಬಳಿಕ ಆತನ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

