ದುಬೈ: ಕಾಣೆಯಾದ ಆರು ವರ್ಷದ ಬಾಲಕಿಯನ್ನು ಮಾಹಿತಿ ದೊರೆತ ಕೇವಲ ಅರ್ಧ ಗಂಟೆಯೊಳಗೆ ಪತ್ತೆಹಚ್ಚಿ ಸುರಕ್ಷಿತವಾಗಿ ಕುಟುಂಬದವರಿಗೆ ಹಸ್ತಾಂತರಿಸಿದ ಘಟನೆ ದುಬೈನಲ್ಲಿ ನಡೆದಿದೆ.
ಫ್ರಿಜ್ ಅಲ್ ಮುರಾರ್ ಪ್ರದೇಶದಲ್ಲಿ ಬಾಲಕಿ ಕಾಣೆಯಾಗಿರುವ ಕುರಿತು ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ನಿಂದ ನೈಫ್ ಪೊಲೀಸ್ ಠಾಣೆಗೆ ಮಾಹಿತಿ ಬಂದ ತಕ್ಷಣ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು. ನೈಫ್ ಪೊಲೀಸ್ ಠಾಣೆ ನಿರ್ದೇಶಕ ಬ್ರಿಗೇಡಿಯರ್ ಒಮರ್ ಮೂಸಾ ಅಶೌರ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಬಾಲಕಿಯ ಚಿತ್ರವನ್ನು ಪೊಲೀಸ್ ಗಸ್ತು ತಂಡಗಳಿಗೆ ರವಾನಿಸಲಾಯಿತು.
ತ್ವರಿತ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇವಲ ಅರ್ಧ ಗಂಟೆಯೊಳಗೆ ಬಾಲಕಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಪತ್ತೆಯಾದ ಸಂದರ್ಭದಲ್ಲಿ ಬಾಲಕಿ ಭಯಭೀತಳಾಗಿ ಅಳುತ್ತಿದ್ದಳು ಎನ್ನಲಾಗಿದೆ. ಪೊಲೀಸರು ಆಕೆಯನ್ನು ಸುರಕ್ಷಿತವಾಗಿ ನೈಫ್ ಪೊಲೀಸ್ ಠಾಣೆಗೆ ಕರೆತಂದು ಅಗತ್ಯ ಆರೈಕೆ ಮತ್ತು ರಕ್ಷಣೆಯನ್ನು ಒದಗಿಸಿದರು.
ಬಾಲಕಿಯು ತಂದೆ ಜೊತೆಗೆ ದಿನಸಿ ಸಾಮಗ್ರಿ ಖರೀದಿಸಲು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಕಾಣೆಯಾಗಿತ್ತು. ಮನೆಗೆ ಹಿಂದಿರುಗಿರಬಹುದು ಎಂದು ಭಾವಿಸಿ ಹುಡುಕಿದರೂ ಬಾಲಕಿ ಪತ್ತೆಯಾಗದ ಹಿನ್ನೆಲೆಯಲ್ಲಿ ಸುತ್ತಮುತ್ತ ಹುಡುಕಾಟ ನಡೆಸಿದ ಬಳಿಕ ತಂದೆ ಪೊಲೀಸರ ನೆರವು ಕೋರಿದ್ದರು.
ಬಾಲಕಿಯ ತಂದೆ ಠಾಣೆಗೆ ಆಗಮಿಸಿದ ಬಳಿಕ ಆಕೆಯನ್ನು ಸುರಕ್ಷಿತವಾಗಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಈ ಘಟನೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳನ್ನು ಒಂಟಿಯಾಗಿ ಬಿಡದಂತೆ ದುಬೈ ಪೊಲೀಸರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಜನದಟ್ಟಣೆಯ ಪ್ರದೇಶಗಳಲ್ಲಿ ಮಕ್ಕಳು ಕುಟುಂಬದಿಂದ ಬೇರ್ಪಟ್ಟರೆ ಏನು ಮಾಡಬೇಕು ಎಂಬುದರ ಕುರಿತು ಮುಂಚಿತವಾಗಿಯೇ ತಿಳಿಸಬೇಕು ಹಾಗೂ ಅಗತ್ಯವಿದ್ದಾಗ ಪೊಲೀಸ್ ಅಧಿಕಾರಿಗಳು ಅಥವಾ ಭದ್ರತಾ ಸಿಬ್ಬಂದಿಯ ನೆರವು ಪಡೆಯುವಂತೆ ಮಕ್ಕಳಿಗೆ ಕಲಿಸಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.

