ಮಂಗಳೂರು : ಮೂಡಬಿದ್ರಿಯಲ್ಲಿ ಕರ್ನಾಟಕ ಸ್ಕ್ವೇಯ್ ಸಂಸ್ಥೆಯ ವತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಕು. ಮರಿಯಮ್ ಸುಹ ಅವರು 11 ವರ್ಷ ವಯೋಮಿತಿಯ 18 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಈ ಸಾಧನೆಯೊಂದಿಗೆ ಅವರು ಒಡಿಶಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡಿದ್ದಾರೆ.
ಮರಿಯಮ್ ಸುಹ ಅವರು ಕಳುವಾರು ಪ್ರಾಥಮಿಕ ಇಂಗ್ಲಿಷ್ ಮಾಧ್ಯಮ ಶಾಲೆ, ಚೇಳ್ಯಾರು ಕಾಲೊನಿಯ 3ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಚೇಳ್ಯಾರು ಪದವು ನಿವಾಸಿಗಳಾದ ಶ್ರೀ ಮುಬಾರಕ್ ಹಾಗೂ ಶ್ರೀಮತಿ ಸಬಿಹಾ ದಂಪತಿಯ ಪುತ್ರಿಯಾಗಿದ್ದಾರೆ. ಇವರು ತರಬೇತುದಾರ ಸರ್ಫರಾಜ್ ಅವರಿಂದ ಮಾರ್ಷಲ್ ಆರ್ಟ್ಸ್ ತರಬೇತಿ ಪಡೆಯುತ್ತಿದ್ದಾರೆ.
ತಾವು ಕಲಿಯುತ್ತಿರುವ ಶಾಲೆ ಹಾಗೂ ಊರಿಗೆ ಕೀರ್ತಿ ತಂದಿರುವ ಈ ಪ್ರತಿಭಾವಂತ ಬಾಲಕಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಪೋಷಕ ವೃಂದ ಅಭಿನಂದನೆ ಸಲ್ಲಿಸಿದ್ದು, ಮುಂದಿನ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ ಎಂದು ಶುಭ ಹಾರೈಸಿದ್ದಾರೆ.

