ಮಂಗಳೂರು: ಸುಮಾರು 9 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಎಲ್ಪಿಸಿ ವಾರಂಟ್ ಆರೋಪಿಯನ್ನು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿಯನ್ನು ಉಳ್ಳಾಲ ಮುಕ್ಕಚೇರಿಯ ಕಿಲೇರಿಯಾ ನಗರದ ನಿವಾಸಿ ಅಶ್ವಾಕ್ (34) ಎಂದು ಗುರುತಿಸಲಾಗಿದೆ.
ಆರೋಪಿತನ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 197/2017ರಡಿ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವು ಮಾನ್ಯ 2ನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಸಿ.ಸಿ. ನಂ. 5442/2018ರಂತೆ ವಿಚಾರಣೆಯಲ್ಲಿತ್ತು. ಆದರೆ, ಆರೋಪಿಯು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ, ನ್ಯಾಯಾಲಯವು ಆತನ ವಿರುದ್ಧ ಎಲ್ಪಿಸಿ ವಾರಂಟ್ ಹೊರಡಿಸಿತ್ತು.
ಈ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸೆಪ್ಟೆಂಬರ್ 8, 2026ರಂದು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಬಳಿಕ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

