ಬೆಂಗಳೂರು, ಸೆ. 10: ರಾಜ್ಯ ಸರ್ಕಾರಿ ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ‘ವಂದೇ ಮಾತರಂ’ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸಾಮಾನ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಸೂಚಿಸಲಾಗಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ‘ವಂದೇ ಮಾತರಂ’ ಗಾಯನದಲ್ಲಿ ಏಕರೂಪತೆ ಹಾಗೂ ಸೂಕ್ತ ಶಿಷ್ಟಾಚಾರ ಕಾಯ್ದುಕೊಳ್ಳುವ ಉದ್ದೇಶದಿಂದ ಸಚಿವ ಸಂಪುಟದ ತೀರ್ಮಾನದಂತೆ ಈ ಆದೇಶ ಹೊರಡಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಆದರೆ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ರಾಜ್ಯಪಾಲರು ಭಾಗವಹಿಸುವ ವಿಶೇಷ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಆರು ಚರಣಗಳನ್ನು ಹಾಡಲು ಅವಕಾಶ ಕಲ್ಪಿಸಲಾಗಿದೆ.
ಭಾರತದ ರಾಷ್ಟ್ರೀಯ ಚಳವಳಿಯ ಸಂದರ್ಭದಲ್ಲಿ ಜನರಲ್ಲಿ ರಾಷ್ಟ್ರೀಯತೆ, ಏಕತೆ ಹಾಗೂ ದೇಶಭಕ್ತಿಯ ಭಾವನೆ ಮೂಡಿಸುವಲ್ಲಿ ‘ವಂದೇ ಮಾತರಂ’ ಮಹತ್ವದ ಪಾತ್ರ ವಹಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಗೀತೆಯ ಗಾಯನ ಹಾಗೂ ವಾದನಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿತ್ತು.
ಹೊಸ ಆದೇಶದಂತೆ ರಾಜ್ಯದಲ್ಲಿನ ಸಾಮಾನ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೊದಲ ಎರಡು ಚರಣಗಳಿಗೆ ಗಾಯನವನ್ನು ಸೀಮಿತಗೊಳಿಸಲಾಗಿದ್ದು, ದೇಶದ ಪ್ರಮುಖ ಗಣ್ಯರು ಭಾಗವಹಿಸುವ ವಿಶೇಷ ಕಾರ್ಯಕ್ರಮಗಳಲ್ಲಿ ಆರು ಚರಣಗಳನ್ನು ಹಾಡಲು ಅವಕಾಶ ನೀಡಲಾಗಿದೆ.

