ಮಂಗಳೂರು: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ (MAHE) ಅಂಗಸಂಸ್ಥೆಯಾದ ಕಸ್ತೂರ್ಬಾ ವೈದ್ಯಕೀಯ ಕಾಲೇಜು (KMC), ಮಂಗಳೂರಿನ ಲೈಟ್ಹೌಸ್ ಹಿಲ್ ರೋಡ್ ಕ್ಯಾಂಪಸ್ನಲ್ಲಿ ಸೆ.14 ಮತ್ತು 15ರಂದು 70ನೇ ವರ್ಷದ ಗಣೇಶ ಚತುರ್ಥಿ ಉತ್ಸವವನ್ನು ಆಚರಿಸಲು ಸಜ್ಜಾಗಿದೆ ಎಂದು ಕೆಎಂಸಿ ಮಂಗಳೂರು ಡೀನ್ ಡಾ.ಬಿ. ಉಣ್ಣಿಕೃಷ್ಣನ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಂಸಿಯ ಗಣೇಶ ಚತುರ್ಥಿ ಆಚರಣೆ ಏಳು ದಶಕಗಳಿಂದ ಕ್ಯಾಂಪಸ್ ಜೀವನದ ಅವಿಭಾಜ್ಯ ಅಂಗವಾಗಿದೆ. ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಉತ್ಸವ ಇಂದು ಜಾಗತಿಕ ಮಟ್ಟದಲ್ಲಿರುವ ಕೆಎಂಸಿ ಸಮುದಾಯದ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳನ್ನು ಒಗ್ಗೂಡಿಸುವ ಪ್ರಮುಖ ಪರಂಪರೆಯಾಗಿ ಬೆಳೆದಿದೆ ಎಂದರು.

ಗಣೇಶ ಚತುರ್ಥಿ ಉತ್ಸವವು ಕೆಎಂಸಿ ಸಮುದಾಯದ ಏಕತೆ, ಸೌಹಾರ್ದತೆ ಮತ್ತು ಪರಸ್ಪರ ಬಾಂಧವ್ಯದ ಸಂಕೇತವಾಗಿದ್ದು, ಪ್ರತಿವರ್ಷ ಉತ್ಸಾಹದಿಂದ ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಎಂಸಿ ಮಂಗಳೂರಿನ ಅಸೋಸಿಯೇಟ್ ಡೀನ್ ಡಾ.ಶೀತಲ್ ಉಳ್ಳಾಲ್, ಡಾ. ಮಂಗಳಾ ಎಂ.ಪೈ, ಡಾ.ಅಶ್ಫಾಕ್ ಮೊಹಮ್ಮದ್ ಹಾಗೂ ವಿದ್ಯಾರ್ಥಿ ಸಂಘದ ಪ್ರಮುಖರಾದ ಅನನ್ಯಾ ಹೆಗ್ಗೇರಿ, ಸೌರವ್ ಉಪಸ್ಥಿತರಿದ್ದರು.

