ಮಸ್ಕತ್: ಭಾರತಕ್ಕೆ ತೆರಳುತ್ತಿದ್ದ ‘ಎಂವಿ ಕೇಪ್ ಡಾವೊ’ (MV Cape Dao) ಎಂಬ ವಾಣಿಜ್ಯ ಹಡಗಿನ ಮೇಲೆ ಓಮನ್ನ ಪೂರ್ವ ಕರಾವಳಿ ಸಮೀಪ ದಾಳಿ ನಡೆದಿದ್ದು, ಘಟನೆಯಲ್ಲಿ ಭಾರತೀಯ ನಾವಿಕರೊಬ್ಬರು ಮೃತಪಟ್ಟಿದ್ದಾರೆ. ಹಡಗಿನಲ್ಲಿದ್ದ 19 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಮೃತ ನಾವಿಕನನ್ನು ಉತ್ತರ ಪ್ರದೇಶದ ದಿಯೋರಿಯಾ ಮೂಲದ ಸೂರಜ್ ಯಾದವ್ ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಮೃತ ನಾವಿಕನ ಕುಟುಂಬಕ್ಕೆ ಸಂತಾಪ ಸೂಚಿಸಿದೆ.
ಘಟನೆ ಕುರಿತು ಓಮನ್ ಅಧಿಕಾರಿಗಳೊಂದಿಗೆ ಭಾರತ ನಿರಂತರ ಸಂಪರ್ಕದಲ್ಲಿದೆ. ಓಮನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ರಕ್ಷಿಸಲ್ಪಟ್ಟಿರುವ ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ವಾಣಿಜ್ಯ ಹಡಗುಗಳ ಮೇಲಿನ ದಾಳಿ ಖಂಡಿಸಿದ ಭಾರತ
ವಾಣಿಜ್ಯ ಹಡಗುಗಳು ಮತ್ತು ನಾವಿಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳು ಗಂಭೀರ ಆತಂಕಕ್ಕೆ ಕಾರಣವಾಗಿವೆ ಎಂದು ಭಾರತ ಹೇಳಿದೆ. ಪ್ರಾದೇಶಿಕ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸುವಂತೆ ಭಾರತ ಕರೆ ನೀಡಿದೆ.
ವಾಣಿಜ್ಯ ಹಡಗುಗಳು, ನಾವಿಕರು ಹಾಗೂ ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು. ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ಮುಕ್ತ ಹಾಗೂ ಸುರಕ್ಷಿತ ನೌಕಾಯಾನವನ್ನು ಶೀಘ್ರ ಪುನಃಸ್ಥಾಪಿಸಬೇಕು ಎಂದು ವಿದೇಶಾಂಗ ಸಚಿವಾಲಯ ಒತ್ತಾಯಿಸಿದೆ.
ಎರಡು ಟಾರ್ಪಿಡೊಗಳಿಂದ ದಾಳಿ ನಡೆದಿರುವ ಶಂಕೆ
ಈ ನಡುವೆ, ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ ಪ್ರಕಾರ, ‘ಎಂವಿ ಕೇಪ್ ಡಾವೊ’ ಹಡಗಿನ ಮೇಲೆ ಎರಡು ಟಾರ್ಪಿಡೊಗಳಿಂದ ದಾಳಿ ನಡೆದಿದೆ ಎನ್ನಲಾಗಿದೆ. ಒಂದು ಟಾರ್ಪಿಡೊ ಹಡಗಿನ ಪೋರ್ಟ್ ಸೈಡ್ನ ಸಿ-ಡೆಕ್ಗೆ ಅಪ್ಪಳಿಸಿದ್ದು, ಅಲ್ಲಿ ಸಿಬ್ಬಂದಿಯ ವಾಸದ ಕೊಠಡಿಗಳಿದ್ದವು ಎಂದು ಸಂಘಟನೆ ತಿಳಿಸಿದೆ.
ಮತ್ತೊಂದು ಟಾರ್ಪಿಡೊ ಎಂಜಿನ್ ರೂಮ್ ಸಮೀಪದ ಪೋರ್ಟ್ ಸೈಡ್ ಹಲ್ಗೆ ಬಡಿದಿದೆ ಎಂದು ಹೇಳಲಾಗಿದೆ. ದಾಳಿಯಿಂದ ಹಡಗಿಗೆ ಉಂಟಾಗಿರುವ ಹಾನಿಯ ಪ್ರಮಾಣದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ದಾಳಿಯ ನಿಖರ ಸ್ವರೂಪ ಹಾಗೂ ಅದರ ಹೊಣೆಗಾರರು ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಅಧಿಕೃತ ತನಿಖೆ ನಡೆಯಬೇಕಿದೆ.
ನಾವಿಕರ ಸುರಕ್ಷತೆಗೆ ಕ್ರಮಕ್ಕೆ ಆಗ್ರಹ
ಘಟನೆಯ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳು ಹಾಗೂ ನಾವಿಕರಿಗೆ ಸುರಕ್ಷಿತ ನೌಕಾಯಾನ ವ್ಯವಸ್ಥೆ ಕಲ್ಪಿಸುವಂತೆ ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ ಆಗ್ರಹಿಸಿದೆ.
ಅಪಾಯದಲ್ಲಿರುವ ನಾವಿಕರ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವುದರ ಜೊತೆಗೆ, ಘಟನೆಗೆ ಕಾರಣರಾದವರನ್ನು ಪತ್ತೆಹಚ್ಚಿ ಹೊಣೆಗಾರಿಕೆ ನಿಗದಿಪಡಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ

