ಮಂಗಳೂರು, ಸೆ.25: ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ರಾಜ್ಯ ಸರ್ಕಾರ ಅನುಸರಿಸುತ್ತಿರುವ ದಮನ ನೀತಿಯನ್ನು ಖಂಡಿಸಿ ಸೆ.28ರಂದು ಬಿ.ಸಿ.ರೋಡ್ ಚಲೋ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಹಿಂಪ) ಪ್ರಾಂತ ಪ್ರಚಾರ ಪ್ರಸಾರ ಸಹ ಪ್ರಮುಖ್ ಪ್ರದೀಪ್ ಸರೀಪಲ್ಲ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ವಿರುದ್ಧದ ದಮನ ನೀತಿಯನ್ನು ರಾಜ್ಯ ಸರ್ಕಾರ ತಕ್ಷಣ ಕೈಬಿಡಬೇಕು. ಭರತ್ ಕುಮೇಲು ಸೇರಿದಂತೆ ಹಿಂದುತ್ವ ಕಾರ್ಯಕರ್ತರ ಮೇಲೆ ಹೇರಿರುವ ಗೂಂಡಾ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸೆ.28ರಂದು ಬೆಳಗ್ಗೆ ಬಿ.ಸಿ.ರೋಡ್ನ ರಕೇಶ್ವರಿ ದೇವಸ್ಥಾನದ ಬಳಿ ಬಿ.ಸಿ.ರೋಡ್ ಚಲೋ ಪ್ರತಿಭಟನಾ ಸಭೆ ನಡೆಯಲಿದೆ. ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಹಾಗೂ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್, ಬಜರಂಗದಳ ಪ್ರಾಂತ ಸಹಸಂಯೋಜಕ ಭುಜಂಗ ಕುಲಾಲ್, ಗ್ರಾಮಾಂತರ ಜಿಲ್ಲಾ ಸಂಯೋಜಕ ಲೋಹಿತ್ ಪಣೋಲಿಬೈಲ್ ಹಾಗೂ ಮಂಗಳೂರು ನಗರ ಸಂಯೋಜಕ ಪ್ರೀತಂ ಕಾಟಿಪಳ್ಳ ಉಪಸ್ಥಿತರಿದ್ದರು.

