ಮಂಗಳೂರು: ನಗರದ ಪಾಂಡೇಶ್ವರ ಸಮೀಪದ ಎಮ್ಮೆಕೆರೆಯ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್ನಲ್ಲಿ ನಡೆದ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ವೇಳೆ ಅನಿರೀಕ್ಷಿತ ಅವಘಡ ಸಂಭವಿಸಿದೆ.
ವಿದ್ಯಾರ್ಥಿಗಳ ಕಾಲೇಜು ಚುನಾವಣೆ ಹಾಗೂ ಪದಗ್ರಹಣ ಸಮಾರಂಭದ ಸಂಭ್ರಮಾಚರಣೆ ವೇಳೆ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸುತ್ತಿದ್ದಾಗ ಕಟ್ಟಡದ ಮೊದಲನೇ ಮಹಡಿಯ ಬಾಲ್ಕನಿಯ ದುರ್ಬಲಗೊಂಡಿದ್ದ ತಡೆಗೋಡೆ ದಿಢೀರ್ ಕುಸಿದು ಬಿದ್ದು, ಐವರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ 16 ವರ್ಷದ ಅಪ್ರಾಪ್ತ ವಿದ್ಯಾರ್ಥಿಯೊಬ್ಬನ ಬ್ರೈನ್ ಡೆಡ್ (ಮೆದುಳು ನಿಷ್ಕ್ರಿಯ) ಆಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಗಾಯಾಳು ವಿದ್ಯಾರ್ಥಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗಾಯಾಳುಗಳಲ್ಲಿ ಹಳೆಯಂಗಡಿಯ ಮಹಮ್ಮದ್ ಶಮಾಜ್ (16) ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೂರಿಂಜೆಯ ಮಹಮ್ಮದ್ ಶನಾನ್ ಅಹಮ್ಮದ್ (18), ಅಡ್ಯಾರ್ನ ಹನೀಫ್ (23), ಕಾವೂರಿನ ಫರ್ಸಿನ್ ಅಹಮ್ಮದ್ (18) ಹಾಗೂ ಕಸಬ ಬೆಂಗ್ರೆಯ ಮಹಮ್ಮದ್ ಶಾಕೀಲ್ ಹುಸೈನ್ (18) ಅವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಘಟನೆ ಮಾಹಿತಿ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಪಿ.ವಿ. ಮೋಹನ್ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿ, ಸಾಂತ್ವನ ಹೇಳಿದರು.

