ಮಂಗಳೂರು: ಕಾಲೇಜು ವಿದ್ಯಾರ್ಥಿಗಳ ಸಂಭ್ರಮದ ಕ್ಷಣವೊಂದು ದುರಂತವಾಗಿ ಮಾರ್ಪಟ್ಟು, ಇದೀಗ ಮತ್ತೊಂದು ಆಘಾತಕಾರಿ ಬೆಳವಣಿಗೆಗೆ ಕಾರಣವಾಗಿದೆ. ನಗರದ ಎಮ್ಮೆಕೆರೆಯ ರಾಮ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್ನಲ್ಲಿ ಬಾಲ್ಕನಿಯ ತಡೆಗೋಡೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಶಮ್ಮಾಝ್ ಚಿಕಿತ್ಸೆ ಫಲಿಸದೆ.ಶನಿವಾರ ರಾತ್ರಿ 11:33ರ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ
ದಕ್ಷಿಣ ಕನ್ನಡ ಜಿಲ್ಲಾ ಆಲ್ ಕಾಲೇಜ್ ಸ್ಟೂಡೆಂಟ್ಸ್ ಅಸೋಸಿಯೇಷನ್ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕಾಗಿ ಕನ್ವೆನ್ಷನ್ ಹಾಲ್ನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಕಾರ್ಯಕ್ರಮ ಮುಗಿಯುವ ಹಂತದಲ್ಲಿ ಹಾಲ್ನ ಒಳಭಾಗದಲ್ಲಿ ಜನಸಂದಣಿ ಹೆಚ್ಚಾಗಿದ್ದರಿಂದ ಹಲವರು ಹೊರಭಾಗದ ಕಾರಿಡಾರ್ ಹಾಗೂ ಬಾಲ್ಕನಿ ಸಮೀಪ ನಿಂತಿದ್ದರು.

ಈ ವೇಳೆ ಬಾಲ್ಕನಿಯ ತಡೆಗೋಡೆಗೆ ವಿದ್ಯಾರ್ಥಿಗಳು ಆಸರೆಯಾಗಿ ನಿಂತಿದ್ದ ಸಂದರ್ಭ ಅದು ಏಕಾಏಕಿ ಕುಸಿದು ಬಿದ್ದಿದೆ. ಘಟನೆಯ ಪರಿಣಾಮ ಹಲವರು ಕೆಳಗೆ ಬಿದ್ದು ಗಾಯಗೊಂಡಿದ್ದು, ಕೆಲವರಿಗೆ ಗಂಭೀರ ಗಾಯಗಳಾಗಿದ್ದವು. ಗಾಯಾಳುಗಳನ್ನು ತಕ್ಷಣವೇ ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಮ್ಮಾಝ್ ಅವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ದುರಂತದ ಬಳಿಕ ಘಟನೆಗೆ ಸಂಬಂಧಿಸಿದಂತೆ ಮೃತ ವಿದ್ಯಾರ್ಥಿಯ ತಂದೆ ಮೊಹಮ್ಮದ್ ಎಲಿಯಾಸ್ ನೀಡಿದ ದೂರಿನ ಆಧಾರದ ಮೇಲೆ ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಕಟ್ಟಡದ ಮಾಲೀಕ ಪರೀಕ್ಷಿತ್ ರೈ ಹಾಗೂ ಕಾರ್ಯಕ್ರಮ ಆಯೋಜಕ, ವಕೀಲ ದಿನಕರ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಬಾಲ್ಕನಿಯ ತಡೆಗೋಡೆಯ ಸ್ಥಿತಿ, ಸ್ಥಳದಲ್ಲಿದ್ದ ಜನಸಂದಣಿ ಹಾಗೂ ಕಾರ್ಯಕ್ರಮದ ಸಂದರ್ಭ ಕೈಗೊಳ್ಳಲಾಗಿದ್ದ ಸುರಕ್ಷತಾ ಕ್ರಮಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.
ವಿದ್ಯಾರ್ಥಿಗಳ ಸಂಭ್ರಮದ ಕ್ಷಣ ದುರಂತದಲ್ಲಿ ಅಂತ್ಯಗೊಂಡಿದ್ದು, ಶಮ್ಮಾಝ್ ಅವರ ಸಾವಿನಿಂದ ಕುಟುಂಬಸ್ಥರು, ಸ್ನೇಹಿತರು ಹಾಗೂ ಸಹಪಾಠಿಗಳಲ್ಲಿ ತೀವ್ರ ದುಃಖ ಆವರಿಸಿದೆ.

