ಮಂಗಳೂರು: ಉರ್ವ ಫ್ರೆಂಡ್ಸ್ ಕಲ್ಚರಲ್ ಅಸೋಸಿಯೇಶನ್ನ ಅಮೃತ ಮಹೋತ್ಸವ ಹಾಗೂ ಆರ್.ಆರ್. ಪೈ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿಯ ಸುವರ್ಣ ಮಹೋತ್ಸವವನ್ನು 2027ರ ಜನವರಿಯಿಂದ ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸಲು ಸಿದ್ಧತೆ ನಡೆಸಲಾಗಿದೆ.
ಪತ್ರಿಕಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಲತೀಶ್ ಕುಮಾರ್ ಯು ,1952ರಲ್ಲಿ ಸ್ಥಾಪನೆಯಾದ ಉರ್ವ ಫ್ರೆಂಡ್ಸ್ ಕಲ್ಚರಲ್ ಅಸೋಸಿಯೇಶನ್ 2027ರಲ್ಲಿ 75ನೇ ವರ್ಷಕ್ಕೆ ಕಾಲಿಡಲಿದೆ. ಇದೇ ವೇಳೆ 1977ರಲ್ಲಿ ಆರಂಭಗೊಂಡ ಆರ್.ಆರ್.ಪೈ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿಯೂ 50 ವರ್ಷಗಳನ್ನು ಪೂರೈಸಲಿದೆ. ಈ ಎರಡೂ ಮಹತ್ವದ ಮೈಲಿಗಲ್ಲುಗಳನ್ನು ಸಂಭ್ರಮಿಸಲು ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಮೃತ ಮಹೋತ್ಸವದ ಅಂಗವಾಗಿ 16 ತಂಡಗಳ ಯು.ಶ್ಯಾಮ್ ಸ್ಮರಣಾರ್ಥ ಮಾಸ್ಟರ್ಸ್ ಕ್ರಿಕೆಟ್ ಪಂದ್ಯಾವಳಿ ಹಾಗೂ ಎಂಟು ತಂಡಗಳ ಮಹಿಳಾ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗುತ್ತದೆ. ಎರಡೂ ವಿಭಾಗಗಳಲ್ಲಿ ತಲಾ 30 ಓವರ್ಗಳ ಪಂದ್ಯಗಳು ನಡೆಯಲಿವೆ.
ಇದರೊಂದಿಗೆ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಗುವುದು. ಮಹಿಳೆಯರಿಗಾಗಿ ಸಾಂಸ್ಕೃತಿಕ ನೃತ್ಯ ಮತ್ತು ನಾಟಕ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಮೃತ ಮಹೋತ್ಸವ ಮತ್ತು ಕ್ರಿಕೆಟ್ ಪಂದ್ಯಾವಳಿಯ ಸುವರ್ಣ ಮಹೋತ್ಸವದ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು. ಉದ್ಯಮಿ ಹಾಗೂ ಕದ್ರಿ ಕ್ರಿಕೆಟರ್ಸ್ನ ಪ್ರಮುಖರಾದ ಅಮೃತ್ ಕದ್ರಿ ಲಾಂಛನ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ತುಳು ರಂಗಭೂಮಿ ಹಾಗೂ ಚಲನಚಿತ್ರ ನಿರ್ದೇಶಕ ಕಿಶೋರ್ ಡಿ.ಶೆಟ್ಟಿ, ಸಂಸ್ಥೆಯ ಗೌರವಾಧ್ಯಕ್ಷ ಡಾ.ಬಿ.ಜಿ.ಸುವರ್ಣ, ಅಧ್ಯಕ್ಷ ಚಂದ್ರಶೇಖರ ಶೆಟ್ಟಿಗಾರ್ ,ಉಪಾಧ್ಯಕ್ಷ ಕನಕದಾಸ್ ಪೂಜಾರಿ, ಕ್ರೀಡಾ ಕಾರ್ಯದರ್ಶಿ ವಿನಾಯಕ್ ಎಸ್.ಉಪಸ್ಥಿತರಿದ್ದರು

