ಹುಬ್ಬಳ್ಳಿ : ದುಬೈ ರಾಷ್ಟ್ರದಲ್ಲಿ ಕಳೆದ 2 ದಶಕಗಳಿಂದ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಮಾಜೋಧಾರ್ಮಿಕ ಕೈಂಕರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಕಡಲಾಚೆಗೂ ಭಾರತೀಯ ಸನಾತನ ಧರ್ಮ, ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ ಮತ್ತು ಆಚರಣೆಗಳ ಪರಂಪರೆಯನ್ನು ಮೂಲ ಬೇರಿನಂತೆ ಜೋಪಾನವಾಗಿ ಪೋಷಿಸಿಕೊಂಡು ಬಂದಿರುವ ತಾಲೂಕಿನ ಸುಳ್ಳ ಗ್ರಾಮದ ವೇದಮೂರ್ತಿ ಪಂಡಿತ ಸಿದ್ಧರಾಮಯ್ಯ ಹಿರೇಮಠ ಸ್ವಾಮೀಜಿ ಅವರ ಕ್ರಿಯಾಶೀಲತೆ ಗುರುತಿಸಿ ಇತ್ತೀಚೆಗೆ ಅವರಿಗೆ ‘ಆಧ್ಯಾತ್ಮಿಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇತ್ತೀಚೆಗೆ ದುಬೈನ ಶ್ರೀಗುರುರಾಘವೇಂದ್ರ ಸೇವಾ ಸಮಿತಿ ವಿಶೇಷವಾಗಿ ಹಮ್ಮಿಕೊಂಡಿದ್ದ ಮಂತ್ರಾಲಯದ ಯತಿವರೇಣ್ಯರಾದ ಶ್ರೀಗುರು ರಾಘವೇಂದ್ರ ತೀರ್ಥರ ಆರಾಧನಾ ಮಹೋತ್ಸವದಲ್ಲಿ ಪಂಡಿತ ಸಿದ್ಧರಾಮಯ್ಯ ಹಿರೇಮಠ ಸ್ವಾಮೀಜಿ ಅವರನ್ನು ಶಾಲುಹೊದಿಸಿ ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಶ್ರೀಗುರು ರಾಘವೇಂದ್ರಮಠದ ಆಚಾರ್ಯರು ಗೌರವಿಸಿದರು.
ದುಬೈದಲ್ಲಿ ನೆಲೆಸಿರುವ ಉದ್ಯಮಿ ಡಾ. ವಿಜಯ್ ಗುಜ್ಜರ್ ಅವರ ಒಡನಾಟದಿಂದ ಸಮಸ್ತ ಅನಿವಾಸಿ ಭಾರತೀಯರಿಗೆ ಕಳೆದ 22 ವರ್ಷಗಳಿಂದ ಭಾರತೀಯ ಮೇರು ಆಧ್ಯಾತ್ಮಿಕ ನೆಲೆಯ ವೇದ, ಆಗಮ ಮತ್ತು ಉಪನಿಷತ್ತುಗಳಲ್ಲಿ ಹೇಳಲಾಗಿರುವ ಎಲ್ಲಾ ಧಾರ್ಮಿಕ ಕೈಂಕರ್ಯಗಳನ್ನು ನಿಖರ ನೆಲೆಯಲ್ಲಿ ನಿರ್ವಹಿಸಿದ ಕೀರ್ತಿಗೆ ಸಿದ್ಧಾರಾಮಯ್ಯ ಸ್ವಾಮೀಜಿ ಭಾಜನರಾಗಿದ್ದಾರೆ.
ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಂವಹನ ಕಲೆ ರೂಢಿಸಿಕೊಂಡು ದುಬೈದಲ್ಲಿ ನೆಲೆಸಿರುವ ಈ ಭಾಷೆಗಳ ಜನರನ್ನು ಸಂಘಟಿಸಿ ಅವರಿಗೆ ಭಾರತೀಯ ಆಧ್ಯಾತ್ಮಿಕ ತತ್ವಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ಚಲನಚಿತ್ರ ನಟ ಪ್ರಣಯರಾಜ ಡಾ. ಶ್ರೀನಾಥ್ ಅವರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಈ ಆರಾಧನಾ ಮಹೋತ್ಸವದ ಅಂಗವಾಗಿ ಗಣಪತಿ ಪೂಜೆ, ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪಾರಾಯಣ, ಕನಕಾಭಿಷೇಕ, ತುಳಸೀದಳ ಪೂಜೆ, ತೊಟ್ಟಿಲು ಸೇವೆ, ಪಲ್ಲಕ್ಕಿ ಸೇವೆ ಹಾಗೂ ರಥೋತ್ಸವ ಸೇರಿದಂತೆ ಇನ್ನೂ ಹಲವಾರು ಸೇವೆಗಳನ್ನು ಗುರುರಾಯರಿಗೆ ಸಮರ್ಪಿಸಲಾಯಿತು.
ಇದೇ ಸಂಧರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಸಮುದಾಯದ ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಶ್ರೀ ಗುರು ರಾಘವೇಂದ್ರ ಸೇವಾ ಸಮಿತಿ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತಲ್ಲದೆ, ಮಹಾ ಅನ್ನದಾಸೋಹ ನಡೆಯಿತು. ಯು.ಎ.ಇ.ನಲ್ಲಿ ನೆಲೆಸಿರುವ ಸಾವಿರಾರು ರಾಯರ ಭಕ್ತರು ಭಾಗವಹಿಸಿದ್ದರು.

