ಮಂಗಳೂರು :ಮತದಾರರ ಪಟ್ಟಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಎಸ್ ಐಆರ್ ಪ್ರಕ್ರಿಯೆ ಆರಂಭಿಸಲಾಗಿತ್ತು. ನುಸುಳುಕೋರರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟು,ಅರ್ಹ ಮತದಾರರು ಸೇರಿಸಿಕೊಂಡು ಹೊಸದಾಗಿ ಮತದಾರರ ಪಟ್ಟಿಪಟ್ಟಿ ಸ್ವಚ್ಛಪಡಿಸಿ ರಚಿಸುವುದಾಗಿ ಹೇಳಿದ ಚುನಾವಣಾ ಆಯೋಗ 13 ಕೋಟಿ ಮತದಾರರನ್ನು ಮತದಾನದ ಪಟ್ಟಿಯಿಂದ ಹೊರಗಿಟ್ಟಿದೆ. ಆದರೆ ನುಸುಳುಕೋರರು ಎಷ್ಟಿದ್ದಾರೆ ಎಂಬ ಪಟ್ಟಿ ಇದುವರೆಗೆ ಬಿಡುಗಡೆ ಮಾಡಿಲ್ಲ ಎಂದು ನಟ ಪ್ರಕಾಶ್ ರಾಜ್ ಆರೋಪಿಸಿದ್ದಾರೆ.

ಮಂಗಳೂರಲ್ಲಿ ಇಂದು ನಡೆದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ದೋಷ ಪೂರಿತವಾದ ಎಸ್ ಐಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಮತ್ತು 2023ರಿಂದ ದೇಶದ ಚುನಾವಣಾ ಆಯೋಗದ ಎಲ್ಲಾ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ದೇಶದ ಚುನಾವಣಾ ಆಯೋಗದ ಮೂವರು ಸಮಾನ ಅಧಿಕಾರವುಳ್ಳ ಆಯುಕ್ತ ರ ನೇಮಕವಾಗಿದ್ದರೂ ಅವರಲ್ಲಿ ಜ್ಞಾನೇಶ್ ಕುಮಾರ್ ಅವರನ್ನು ನೇಮಕ ಮಾಡಿರುವುದರಲ್ಲಿ ಆಳುವ ಪಕ್ಷದ ಪ್ರಮುಖ ಪಾತ್ರ ಸ್ಪಷ್ಟವಾಗಿದೆ. ಅವರ ಮೇಲೆ ಪ್ರಕರಣ ದಾಖಲಿಸುವುದನ್ನು ತಡೆಯಲು 2023ರಲ್ಲಿ ಶಾಸನದಲ್ಲಿ ತಿದ್ದುಪಡಿ ಮಾಡಲಾಗಿದೆ. ಇಬ್ಬರು ಚುನಾವಣಾ ಆಯುಕ್ತರು ಎಸ್ಐಆರ್ ಪ್ರಕ್ರಿಯೆಯ ನ್ಯೂನತೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ 2023ರ ನಂತರದ ಚುನಾವಣಾ ಆಯೋಗದ ನಡೆಗಳ ಬಗ್ಗೆ ದೇಶದ ಜನ ಸಂಶಯ ಪಡುವಂತಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ 2023ರಿಂದಲೇ ದಾಖಲೆಗಳ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರಕಾಶ್ ರಾಜ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್ಐಆರ್ ಪ್ರತಿಶೋಧ ಮತ್ತು ಪ್ರತಿರೋಧ ಅಭಿಯಾನದ ಮುಖಂಡರಾದ ಕೆ.ಎಲ್.ಅಶೋಕ್, ಅಬ್ದುಲ್ ಮಜೀದ್, ವಿನೋದ್ ಮಸ್ಕರೇನಸ್, ಅಬ್ದುಲ್ ಸಲಾಂ ಸಿ.ಎಚ್. ಮೊದಲಾದವರು ಉಪಸ್ಥಿತರಿದ್ದರು.

