ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪರಿಶಿಷ್ಟ ಜಾತಿ (ಎಸ್ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್ಟಿ) ಸಮುದಾಯಕ್ಕೆ ಸೇರಿದ ಪ್ರೇರಣಾದಾಯಕ ಉದ್ಯಮಿಗಳು, ಸಮಾಜ ಸೇವಕರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಗುರುತಿಸಿ, ಅವರ ಬದುಕು ಮತ್ತು ಸಾಧನೆಗಳನ್ನು ದಾಖಲಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್, ಮಂಗಳೂರು ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿ ಸ್ವಂತ ಪರಿಶ್ರಮ, ಧೈರ್ಯ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಬದ್ಧತೆಯಿಂದ ಸಾಧನೆ ಮಾಡಿರುವ ವ್ಯಕ್ತಿಗಳ ಜೀವನಾನುಭವಗಳನ್ನು ದಾಖಲಿಸಿ, ಯುವಜನರು ಹಾಗೂ ಮುಂದಿನ ಪೀಳಿಗೆಗೆ ಪ್ರೇರಣೆಯಾಗಿಸುವುದು ಈ ಪ್ರಯತ್ನದ ಉದ್ದೇಶವಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವಾಸಿಸುವ ಅಥವಾ ಜಿಲ್ಲೆಗಳೊಂದಿಗೆ ಸಂಬಂಧ ಹೊಂದಿರುವ ಎಸ್ಸಿ, ಎಸ್ಟಿ ಸಮುದಾಯದ ಯಶಸ್ವಿ ಉದ್ಯಮಿಗಳು, ಸಮಾಜ ಸೇವಕರು, ಶಿಕ್ಷಣ, ಕಲೆ, ಕ್ರೀಡೆ, ಸಾಹಿತ್ಯ, ಕೃಷಿ, ವೃತ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಹಾಗೂ ಇತರರಿಗೆ ಉದ್ಯೋಗ, ಮಾರ್ಗದರ್ಶನ ಮತ್ತು ಸಾಮಾಜಿಕ ನೆರವು ನೀಡುತ್ತಿರುವ ಸಾಧಕರನ್ನು ಗುರುತಿಸಿ ಅವರ ಕುರಿತು ಬರಹ ಕಳುಹಿಸಬಹುದು.
ಸಾಧಕರ ಕುರಿತು ಒಂದರಿಂದ ಎರಡು ಪುಟ ಮೀರದ ಸಂಕ್ಷಿಪ್ತ ಬರಹದಲ್ಲಿ ಸಾಧಕರ ಹೆಸರು ಮತ್ತು ವಿಳಾಸ, ಶಿಕ್ಷಣ ಹಾಗೂ ಕುಟುಂಬ ಹಿನ್ನೆಲೆ, ಎದುರಿಸಿದ ಪ್ರಮುಖ ಸವಾಲುಗಳು, ಉದ್ಯಮ ಅಥವಾ ಸಮಾಜ ಸೇವಾ ಕ್ಷೇತ್ರದಲ್ಲಿನ ಸಾಧನೆಗಳು ಮತ್ತು ಕೊಡುಗೆಗಳು ಹಾಗೂ ಸಮಾಜಕ್ಕೆ ನೀಡುವ ಸಂದೇಶ ಅಥವಾ ಪ್ರೇರಣೆಯ ಮಾಹಿತಿಯನ್ನು ಒಳಗೊಂಡಿರಬೇಕು. ಸಾಧನೆಗೆ ಸಂಬಂಧಿಸಿದ ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಬರಹದೊಂದಿಗೆ ಕಳುಹಿಸಬಹುದು. ಸ್ವತಃ ತಮ್ಮ ಕುರಿತು ಅಥವಾ ಪರಿಚಯದಲ್ಲಿರುವ ಅರ್ಹ ವ್ಯಕ್ತಿಗಳ ಕುರಿತು ಬರಹಗಳನ್ನು ಸಹ ಸಲ್ಲಿಸಬಹುದಾಗಿದೆ.
ಸ್ವೀಕರಿಸಲಾದ ಬರಹಗಳಲ್ಲಿ ಉತ್ತಮ ಗುಣಮಟ್ಟ, ನೈಜ ಮಾಹಿತಿ, ವೈಶಿಷ್ಟ್ಯತೆ ಹಾಗೂ ಪ್ರೇರಣಾದಾಯಕ ಮೌಲ್ಯಗಳನ್ನು ಹೊಂದಿರುವ ಬರಹಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಉತ್ತಮ ಬರಹಗಳಿಗೆ ಟ್ರಸ್ಟ್ ವತಿಯಿಂದ ಗೌರವ ಸಂಭಾವನೆ ನೀಡಲಾಗುವುದು. ಅಲ್ಲದೆ, ಆಯ್ಕೆಯಾದ ಬರಹಗಳನ್ನು ಟ್ರಸ್ಟ್ನ ಪ್ರಕಟಣೆ ಅಥವಾ ವಿಶೇಷ ಸಂಚಿಕೆಯಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.
ಬರಹ ಕಳುಹಿಸುವವರು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಅಗತ್ಯ ದಾಖಲೆಗಳು ಮತ್ತು ಛಾಯಾಚಿತ್ರಗಳೊಂದಿಗೆ ಅಧ್ಯಕ್ಷರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್, ಉರ್ವ ಗಾಂಧಿನಗರ, ಅಶೋಕನಗರ ಅಂಚೆ, ಮಂಗಳೂರು–575006 ವಿಳಾಸಕ್ಕೆ ಅಕ್ಟೋಬರ್ 15, 2026ರೊಳಗೆ ಕಳುಹಿಸಿಕೊಡುವಂತೆ ಟ್ರಸ್ಟ್ನ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

