ಮಂಗಳೂರು: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿ.ಕೆ.ಎಸ್.ಸಿ) ತನ್ನ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಅಕ್ಟೋಬರ್ 1ರಿಂದ 31ರವರೆಗೆ ಒಂದು ತಿಂಗಳ ಕಾಲ ವಿವಿಧ ಸಮಾಜಮುಖಿ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಡಿಕೆಎಸ್.ಸಿ ಜಿಲ್ಲಾ ಸಮಿತಿಯ ಪ್ರ.ಕಾರ್ಯದರ್ಶಿ ಇಸಾಕ್ ಬೊಳ್ಳಾಯಿ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1995ರ ಅಕ್ಟೋಬರ್ 13ರಂದು ಆರಂಭಗೊಂಡ ಡಿ.ಕೆ.ಎಸ್.ಸಿ ಇಂದು 13 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಸಂಘಟನೆಯಾಗಿ ಬೆಳೆದಿದ್ದು, ಯುವಕರಿಗಾಗಿ ಯೂತ್ ವಿಂಗ್ ಕೂಡ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ, ರಾಷ್ಟ್ರೀಯ, ರಾಜ್ಯ, ಜಿಲ್ಲಾ, ತಾಲೂಕು ಹಾಗೂ ಯುನಿಟ್ ಮಟ್ಟದಲ್ಲಿ ಸಂಘಟನೆ ಕಾರ್ಯನಿರ್ವಹಿಸುತ್ತಿದೆ.
ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸಮೀಪದ ವಿಶಾಲ ಕ್ಯಾಂಪಸ್ನಲ್ಲಿ ಅಲ್ ಇಹ್ವಾನ್ ಹೆಸರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಕಾಲೇಜು, ಮಹಿಳಾ ಶರೀಅತ್ ಕಾಲೇಜು, ವಸತಿ ನಿಲಯ, ಹಿಷ್ಣುಲ್ ಕುರ್ಆನ್ ತರಬೇತಿ, ಕಂಪ್ಯೂಟರ್ ಹಾಗೂ ಮಹಿಳೆಯರಿಗೆ ಟೈಲರಿಂಗ್ ತರಬೇತಿ ಸೇರಿದಂತೆ ಹಲವು ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿವೆ. ಸಂಸ್ಥೆಯಲ್ಲಿ 2,500ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, 250ಕ್ಕೂ ಅಧಿಕ ಶಿಕ್ಷಕ-ಶಿಕ್ಷಕಿಯರು ಸೇವೆ ಸಲ್ಲಿಸುತ್ತಿದ್ದಾರೆ.

ಅಲ್ ಇಹ್ವಾನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ರಾಜ್ಯ ಮಟ್ಟದಲ್ಲಿ ರ್ಯಾಂಕ್ಗಳನ್ನು ಗಳಿಸಿದ್ದು, ಕ್ರೀಡಾ ಕ್ಷೇತ್ರದಲ್ಲೂ ಹಲವು ಸಾಧನೆಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಸಂಘಟನೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಹಿಜಾಮ ಚಿಕಿತ್ಸೆ, ಪರಿಸರ ಸ್ವಚ್ಛತೆ ಹಾಗೂ ಮಾದಕ ವ್ಯಸನ ವಿರೋಧಿ ಜಾಗೃತಿ ಕಾರ್ಯಕ್ರಮ, ರೋಗಿಗಳಿಗೆ ಹಣ್ಣುಹಂಪಲು ವಿತರಣೆ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಬಂಟ್ವಾಳ ತಾಲೂಕಿನ ಮುಡಿಪು ಸಮೀಪ 12 ಎಕರೆ ಜಾಗವನ್ನು ಖರೀದಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾನೂನು, ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜು ಹಾಗೂ ತಾಂತ್ರಿಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ‘ಅಲ್ ಇನ್ಸಾನ್ ಯುನಿವರ್ಸಿಟಿ’ ರೂಪಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಸಂಘಟನೆ ಹೊಂದಿದೆ. ಈ ಯೋಜನೆಗಾಗಿ ಝಕರಿಯಾ ಜೋಕಟ್ಟೆ ಅವರ ನೇತೃತ್ವದಲ್ಲಿ ‘ವಿಷನ್ 30 & ಬಿಯಾಂಡ್’ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗಿದೆ.
ಅಕ್ಟೋಬರ್ 1ರಂದು ಕುಂಬೋಳ್ ಸಾದಾತ್ರವರ ಮಕ್ವರ ಝಿಯಾರತ್ನೊಂದಿಗೆ 30 ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬಳಿಕ 33 ಮಹಲ್ಗಳ ಸಂದರ್ಶನ, ಮನೆ-ಮನೆ ಭೇಟಿ, ಸದಸ್ಯತ್ವ ಅಭಿಯಾನ, ಆಹಾರ ಸಾಮಗ್ರಿ ಸಂಗ್ರಹ, ಅಕ್ಟೋಬರ್ 13ರಂದು ಎಲ್ಲಾ ಘಟಕಗಳಲ್ಲಿ ಹಾಗೂ ಮರ್ಕಝ್ ಕ್ಯಾಂಪಸ್ನಲ್ಲಿ ಧ್ವಜಾರೋಹಣ, 33 ಸಾಮೂಹಿಕ ಮುಂಜಿ ಕಾರ್ಯಕ್ರಮ, ಉಚಿತ ಹಿಜಾಮ ಚಿಕಿತ್ಸೆ, ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಸಂಘಟನೆಗಾಗಿ ಸೇವೆ ಸಲ್ಲಿಸಿ ನಿಧನರಾದ ಸದಸ್ಯರು ಹಾಗೂ ಅವರ ಕುಟುಂಬಸ್ಥರಿಗಾಗಿ ದುವಾ ಕಾರ್ಯಕ್ರಮ, ಮಾಸಿಕ ಜಲಾಲಿಯ ಮಜ್ಲಿಸ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 31ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಮಕ್ಕಳು ಮತ್ತು ಪೋಷಕರಿಗಾಗಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ.ಎಸ್.ಸಿ ಕಾರ್ಯಾಧ್ಯಕ್ಷ ಮನ್ಸೂರ್ ಕೃಷ್ಣಾಪುರ, ದೇರಳಕಟ್ಟೆ ಘಟಕದ ಅಧ್ಯಕ್ಷ ಕೆ.ಸಿ.ಇಸ್ಮಾಯಿಲ್ ಕಿನ್ಯ, ಜಿಲ್ಲಾ ಹಣಕಾಸು ಕಾರ್ಯದರ್ಶಿ ಅಹ್ಮದ್ ಶರೀಫ್ ಬಜ್ಜೆ ಹಾಗೂ ಸಂವಹನಾ ಕಾರ್ಯದರ್ಶಿ ಸಂಶುದ್ದೀನ್ ಬಳ್ಳುಂಜೆ ಉಪಸ್ಥಿತರಿದ್ದರು.

