ಮಂಗಳೂರು, ಸೆ.29: ಜಿಲ್ಲಾ ನ್ಯಾಯಾಲಯದ ಸಮೀಪ ಸರಕು ಸಾಗಣೆ ಆಟೋರಿಕ್ಷಾ, ನ್ಯಾಯಾಧೀಶರ ಕಾರು ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋರಿಕ್ಷಾ ಚಾಲಕ ಮೃತಪಟ್ಟಿದ್ದು, ಮೊದಲ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.
ಸೆ.29ರಂದು ಬೆಳಗ್ಗೆ ಸುಮಾರು 10 ಗಂಟೆಗೆ ಘಟನೆ ನಡೆದಿದೆ. ಹ್ಯಾಟ್ ಹಿಲ್ನಲ್ಲಿರುವ ನಿವಾಸದಿಂದ ನ್ಯಾಯಾಲಯದತ್ತ ಕಾರಿನಲ್ಲಿ ತೆರಳುತ್ತಿದ್ದ ನ್ಯಾಯಾಧೀಶ ಅವರ ಕಾರು ರಾಧಾ ಮೆಡಿಕಲ್ಸ್ ಸಮೀಪದಿಂದ ನ್ಯಾಯಾಲಯದ ರಸ್ತೆಗೆ ಪ್ರವೇಶಿಸುತ್ತಿದ್ದ ವೇಳೆ, ಸರಕು ಸಾಗಣೆ ಆಟೋರಿಕ್ಷಾ ಬಂದು ಅವರ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಆಟೋರಿಕ್ಷಾ ಪಲ್ಟಿಯಾಗಿ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಟೋರಿಕ್ಷಾ ಚಾಲಕ ಮಂಜೇಶ್ವರದ 65 ವರ್ಷದ ಚಂದ್ರು ಅವರಿಗೆ ಗಂಭೀರ ಗಾಯವಾಗಿದೆ,, ನ್ಯಾಯಾಧೀಶ ಹಾಗೂ ಸ್ಕೂಟರ್ ಸವಾರನಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗಂಭೀರವಾಗಿ ಗಾಯಗೊಂಡಿದ್ದ ಚಂದ್ರು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಮಂಗಳೂರು ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

