ಮಂಗಳೂರು: ನಗರದ ಹೊರವಲಯದ ಸುರತ್ಕಲ್ ಸಮೀಪ ಎಂಆರ್ಪಿಎಲ್ ಘಟಕದ ಬಳಿ ಬುಧವಾರ ಭಾರೀ ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಸ್ಫೋಟದ ಭಾರೀ ಶಬ್ದ ಹಾಗೂ ಕಂಪನದಿಂದ ಜೋಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮನೆಗಳು ಮತ್ತು ಕಟ್ಟಡಗಳು ಕಂಪಿಸಿದವು. ಕೆಲವು ಮನೆಗಳ ಬಾಗಿಲು, ಕಿಟಕಿಗಳು ಅಲುಗಾಡಿದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸ್ಫೋಟದ ಬೆನ್ನಲ್ಲೇ ಘಟನಾ ಪ್ರದೇಶದ ಆಕಾಶದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಅಂಗರಗುಂಡಿ, ಬೈಕಂಪಾಡಿ ಕೈಗಾರಿಕಾ ಪ್ರದೇಶ, ಕುಳಾಯಿ ಸೇರಿದಂತೆ ಹಲವು ಕಡೆಗಳಲ್ಲೂ ಸ್ಫೋಟದ ಸದ್ದು ಕೇಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಫೋಟದ ನಿಖರ ಕಾರಣ, ಘಟಕದೊಳಗಿನ ಪರಿಸ್ಥಿತಿ ಹಾಗೂ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾಗಿದೆಯೇ ಎಂಬ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.


