ಧಾರವಾಡ : ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ವಿಭಾಗದ ಫುಟ್ ಬಾಲ್ ಪಂಧ್ಯದ ಸ್ಪರ್ಧೆಯಲ್ಲಿ ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀಶಾಂತೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.
ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಐ ಕಚೇರಿ ಇತ್ತೀಚೆಗೆ ಸುತಗಟ್ಟಿ ಗ್ರಾಮದ ಡಾನ್ ಬಾಸ್ಕೋ ಶಾಲೆಯ ಮೈದಾನದಲ್ಲಿ ಸಂಘಟಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲ ತಾಲೂಕುಗಳ ತಂಡಗಳನ್ನು ಸೋಲಿಸಿದ ಅಮ್ಮಿನಬಾವಿ ಗ್ರಾಮದ ಶ್ರೀಶಾಂತೇಶ್ವರ ಪ್ರೌಢ ಶಾಲೆಯ ಬಾಲಕಿಯರ ತಂಡವು ಪ್ರಥಮ ಸ್ಥಾನದ ಪಾರಿತೋಷಕವನ್ನು ತನ್ನದಾಗಿಸಿಕೊಂಡಿತು

ಅಭಿನಂದನೆ : ಶ್ರೀಶಾಂತೇಶ್ವರ ಪ್ರೌಢ ಶಾಲೆಯ ಆಡಳಿತ ಮಂಡಳಿಯು ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಶಾಲೆಗೆ ಕೀರ್ತಿ ತಂದ ಬಾಲಕಿಯರ ಫುಟ್ಬಾಲ್ ತಂಡದ ಮಹೇಶ್ವರಿ ದೇವರಮನಿ (ನಾಯಕಿ), ಸೌಂದರ್ಯ ದಾಸನಕೊಪ್ಪ(ಉಪ ನಾಯಕಿ), ದೀಪಾ ಕುರುಬರ, ಸುಶ್ಮಿತಾ ಒಕ್ಕುಂದ, ಸೌಮ್ಯಾ ಹಡಪದ, ಗಂಗಮ್ಮಾ ಮಗರನವರ, ದೀಪಿಕಾ ಭೂಸಾರಿ, ಸಹನಾ ಗುಡಿ, ವನಿತಾ ಪಾಟೀಲ, ಮಧು ಬಣವಿ, ರಕ್ಷಿತಾ ಜಾಲಗಾರ ಹಾಗೂ ಕೋಚಿಂಗ್ ನೀಡಿದ ದೈಹಿಕಶಿಕ್ಷಣ ಶಿಕ್ಷಕ ಬಿ.ಬಿ.ಮಡಿವಾಳರ ಅವರನ್ನು ಗೌರವಿಸಲಾಯಿತು.
ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಶೇಖಣ್ಣ ಹುಲಗೂರ, ಕಾರ್ಯದರ್ಶಿ ಎಸ್.ಎಂ.ಹುರಳಿ, ನಿರ್ದೇಶಕರುಗಳಾದ ಬಿ.ಎನ್.ನವಲಗುಂದ, ಬಿ.ಪಿ.ಧನಶೆಟ್ಟಿ, ಬಿ.ಸಿ.ಕೊಳ್ಳಿ, ಎಂ.ಜಿ.ಕುಸುಗಲ್ಲ, ಜಿ.ಎಂ.ಹ0ಚಿನಾಳ, ಎ.ಆರ್.ಗುಡಿ, ಎಸ್.ಎಂ.ಹುಲಗೂರ, ಡಾ. ಈರಣ್ಣ ಅಮ್ಮಿನಬಾವಿ, ಶಿವಶಂಕರ ನವಲಗುಂದ ಇದ್ದರು. ಮುಖ್ಯಾಧ್ಯಾಪಕ ಎನ್.ಬಿ.ಅಮರಗೋಳ ಸ್ವಾಗತಿಸಿದರು. ಶಿಕ್ಷಕ ಡಿ. ಆದಿತ್ಯಾ ನಿರೂಪಿಸಿದರು. ಅಧ್ಯಾಪಕಿ ಆರತಿ ಬಸಾಪೂರ ವಂದಿಸಿದರು.
ಕೋಟ್ :ಈಗ ನಿತ್ಯವೂ ಪಿ.ಇ. ಶಿಕ್ಷಕರಾದ ಬಿ.ಬಿ.ಮಡಿವಾಳರ ಅವರು ಗೆಲುವು ಸಾಧಿಸಲು ಅಗತ್ಯವಾದ ಆಟದ ಸ್ಕಿಲ್ಗಳನ್ನು ಹೇಳಿಕೊಡುತ್ತಿದ್ದು, ನಮ್ಮ ಫುಟ್ಬಾಲ್ ತಂಡ ವಿಭಾಗ ಮಟ್ಟದಲ್ಲಿಯೂ ಭರ್ಜರಿ ಗೆಲುವು ಸಾಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಭರವಸೆ ಹೊಂದಿದೆ.” — ಮಹೇಶ್ವರಿ ದೇವರಮನಿ(ನಾಯಕಿ)

