ಕಾಸರಗೋಡು: ಖ್ಯಾತ ಕವಿ, ಸಾಹಿತಿ ಹಾಗೂ ಕನ್ನಡ ಹೋರಾಟಗಾರ ಡಾ. ರಮಾನಂದ ಬನಾರಿ ಮತ್ತು ಜನಪ್ರಿಯ ಕವಿ, ಲೇಖಕ ಬಸವರಾಜ ಭಾಗೇವಾಡಿ ಮಠ ಅವರು 2026ನೇ ಸಾಲಿನ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ–ಸುಬ್ರಹ್ಮಣ್ಯ ದೇವಸ್ಥಾನದ ದಸರಾ ವೇದಿಕೆಯಲ್ಲಿ ಅಕ್ಟೋಬರ್ 11ರಿಂದ 20ರವರೆಗೆ ನಡೆಯಲಿರುವ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ–2026’ರ ಅಂಗವಾಗಿ ಅಕ್ಟೋಬರ್ 18ರಂದು ಕಾಸರಗೋಡು ದಸರಾ ಕವಿ ಸಮ್ಮೇಳನ ಆಯೋಜಿಸಲಾಗಿದೆ.
ಭಾನುವಾರ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಕವಿ ಸಮ್ಮೇಳನದಲ್ಲಿ ಆಯ್ಕೆಯಾದ ಕವಿಗಳಿಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ–2026’ ಪ್ರದಾನ ಮಾಡಿ ಗೌರವಿಸಲಾಗುವುದು.
ಸಾಹಿತ್ಯ ಸಂಘಟಕ ಬಿ. ಶ್ರೀನಿವಾಸ್ ಬಹಾದ್ದೂರ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಚುಟುಕು ಬ್ರಹ್ಮ ಹಾಗೂ ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಡಾ. ಎಂ.ಜಿ.ಆರ್. ಅರಸ್, ಮೈಸೂರು ಉದ್ಘಾಟಿಸಲಿದ್ದಾರೆ. ಮೈಸೂರಿನ ಖ್ಯಾತ ಕವಿ, ಸಾಹಿತ್ಯ ರತ್ನ ಜಯಪ್ಪ ಹೊನ್ನಾಳಿ (ಜಯ ಕವಿ ಮೈಸೂರು) ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.
ರಾಷ್ಟ್ರಮಟ್ಟದ ಕವಿ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಸುಮಾರು 75 ಮಂದಿ ಕವಿಗಳು ಭಾಗವಹಿಸಲಿದ್ದು, ಅವರ ಪೈಕಿ 21 ಮಂದಿ ಕವಿಗಳಿಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ–2026’ ನೀಡಿ ಸನ್ಮಾನಿಸಲಾಗುವುದು ಎಂದು ಕಾಸರಗೋಡು ದಸರಾ ಸಂಚಾಲಕ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಮತ್ತು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ–ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಪಾಂಗೋಡು ಪ್ರವೀಣ್ ನಾಯಕ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು ಮಿತ್ರ

