ಸುರತ್ಕಲ್ :ಮಂಗಳೂರಿನ ಎಂ.ಆರ್.ಪಿ.ಎಲ್.ನಲ್ಲಿ ನಿನ್ನೆ ಸಂಭವಿಸಿದ ಸ್ಪೋಟದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಹಾಗೂ ಗಾಯಗೊಂಡ ಕಾರ್ಮಿಕರಿಗೆ ತಕ್ಷಣ ಪರಿಹಾರ ನೀಡಬೇಕು. ಕಾರ್ಮಿಕರ ಸುರಕ್ಷತೆಗೆ ಕ್ರಮವಹಿಸಬೇಕು ಹಾಗೂ ಕಾರ್ಮಿಕರ ಸವಲತ್ತು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಸಂಸ್ಥೆಯ ಕಾರ್ಗೊಗೇಟ್ ಬಳಿ ಎಂಆರ್ಪಿಎಲ್ ಕಾರ್ಮಿಕರ ಸಂಘ, ಕರ್ಮಚಾರಿ ಸಂಘ ಹಾಗೂ ಬಿಎಂಎಸ್ ನೇತೃತ್ವದಲ್ಲಿ ಇಂದು ಧರಣಿ ನಡೆಸಿದ್ರು.
ಇಎಸ್ಐ ಸೌಲಭ್ಯ ಇಲ್ಲದ ಕಾರ್ಮಿಕರಿಗೆ 5 ಲಕ್ಷದವರೆಗೆ ವೈದ್ಯಕೀಯ ಸವಲತ್ತನ್ನು ನೀಡುವ ಕುರಿತು 15 ದಿನಗಳ ಒಳಗೆ ತೀರ್ಮಾನ ಕೈಗೊಳ್ಳುವುದಾಗಿ ಎಂಆರ್ಪಿಎಲ್ ಅಧಿಕಾರಿಗಳು ಭರವಸೆ ನೀಡಿದರು.ಆದರೆ ಅದಕ್ಕೆ ಪ್ರತಿಭಟನಕಾರರು ಒಪ್ಪಲಿಲ್ಲ.
ಕಾರ್ಮಿಕರಿಗೆ ಗರಿಷ್ಠ ₹ 10 ಲಕ್ಷ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಕಲ್ಪಿಸಬೇಕು. ಈ ಬಗ್ಗೆ ಎಂ.ಆರ್.ಪಿ.ಎಲ್ ವ್ಯವಸ್ಥಾಪಕ ನಿರ್ದೇಶಕರೇ ಸ್ಥಳಕ್ಕೆ ಬಂದು ಲಿಖಿತ ಭರವಸೆ ನೀಡಬೇಕು. ಇಲ್ಲದಿದ್ದರೆ ಸ್ಪೋಟದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಮೃತದೇಹವನ್ನು ಇಲ್ಲಿಗೇ ತಂದು ಹೋರಾಟ ಮುಂದುವರಿಸುತ್ತೇವೆ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಎಂ.ಡಿ ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸಿ ಕಾರ್ಮಿಕರು ಕಾರ್ಗೊ ಗೇಟ್ ಮುಂದೆ ಧರಣಿ ಮುಂದುವರಿಸಿದರು. ಶಾಸಕ ಉಮಾನಾಥ ಕೋಟ್ಯಾನ್, ಎಂಆರ್ಪಿಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಶರತ್ ಜೋಗಿ, ಸ್ಥಳೀಯ ಮುಖಂಡರಾದ ಪ್ರಶಾಂತ್ ಮೂಡಾಯಿಕೋಡಿ, ಪ್ರಸಾದ್ ಅಂಚನ್, ಸತ್ಯಜಿತ್ ಸುರತ್ಕಲ್, ಭರತ್ ರಾಜ್ ಕೃಷ್ಣಾಪುರ, ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಬೊಳ್ಳಾಜೆ ಮತ್ತಿತರರು ಭಾಗವಹಿಸಿದ್ದರು

