ದುಬೈ: ತುಳುನಾಡಿನ ಸಾಂಪ್ರದಾಯಿಕ ಆಹಾರ, ಕಲೆ, ಸಂಸ್ಕೃತಿ ಹಾಗೂ ಸೌಹಾರ್ದತೆಯನ್ನು ಅನಾವರಣಗೊಳಿಸುವ ‘ಆಟಿದೊಂಜಿ ದಿನತಾ ಉತ್ಸವ–2026’ರ 5ನೇ ಆವೃತ್ತಿ ಅ.4ರಂದು ದುಬೈನಲ್ಲಿ ನಡೆಯಲಿದೆ. ಯುಎಇಯ ವಿವಿಧ ಭಾಗಗಳ ತುಳು–ಕನ್ನಡಿಗರನ್ನು ಒಂದೆಡೆ ಸೇರಿಸಿ ತುಳುನಾಡಿನ ವೈವಿಧ್ಯಮಯ ಪರಂಪರೆಯನ್ನು ಪರಿಚಯಿಸುವುದು ಉತ್ಸವದ ಪ್ರಮುಖ ಉದ್ದೇಶವಾಗಿದೆ.
ದಿನವಿಡೀ ನಡೆಯಲಿರುವ ಉತ್ಸವದಲ್ಲಿ ತುಳುನಾಡಿನ ವಿವಿಧ ಸಾಂಪ್ರದಾಯಿಕ ಖಾದ್ಯಗಳು, ಪಾಯಸ ಹಾಗೂ ಔಷಧೀಯ ಕಷಾಯಗಳ ಸವಿಯೂಟ ಇರಲಿದೆ. ಇದರೊಂದಿಗೆ ಶಾಸ್ತ್ರೀಯ ಹಾಗೂ ಜಾನಪದ ನೃತ್ಯ, ಸಂಗೀತ, ಮಿಮಿಕ್ರಿ, ಹಾಸ್ಯ ಕವಿತೆ, ಕಿರು ನಾಟಕ, ಫ್ಯಾನ್ಸಿ ಡ್ರೆಸ್ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸುಮಾರು 100 ಕಲಾವಿದರು ಹಾಗೂ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.
ಉತ್ಸವದಲ್ಲಿ ಉಚಿತ ವೈದ್ಯಕೀಯ ಹಾಗೂ ಕಣ್ಣಿನ ತಪಾಸಣೆ, ಆಯುರ್ವೇದ ಸಲಹೆ, ವೆಲ್ನೆಸ್ ಕೌಂಟರ್ ಸೇರಿದಂತೆ ಆರೋಗ್ಯ ಸಂಬಂಧಿತ ಸೇವೆಗಳ ವ್ಯವಸ್ಥೆ ಇರಲಿದೆ. ಕುಟುಂಬಗಳಿಗಾಗಿ ವಿವಿಧ ಕೌಶಲ್ಯಾಧಾರಿತ ಆಟಗಳು ಹಾಗೂ ಮನರಂಜನಾ ಚಟುವಟಿಕೆಗಳನ್ನೂ ಆಯೋಜಿಸಲಾಗಿದೆ.
ಅ.4ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಅಲ್ ಗರ್ಹೌಡ್ ಬಾಲ್ರೂಮ್, ಮಿಲೇನಿಯಂ ಏರ್ಪೋರ್ಟ್ ಹೋಟೆಲ್, ಅಲ್ ಗರ್ಹೌಡ್, ದುಬೈನಲ್ಲಿ ಉತ್ಸವ ನಡೆಯಲಿದೆ. ತುಳುನಾಡಿನ ಆಹಾರ, ಕಲೆ, ಸಂಸ್ಕೃತಿ ಹಾಗೂ ಸೌಹಾರ್ದತೆಯ ಸಂಭ್ರಮವನ್ನು ಅನಾವರಣಗೊಳಿಸುವ ಈ ಕಾರ್ಯಕ್ರಮವು ಯುಎಇಯ ತುಳು–ಕನ್ನಡಿಗರಿಗೆ ವಿಶೇಷ ಅನುಭವ ನೀಡಲಿದೆ.

