ಮಂಗಳೂರು, ಅ.1: ಎಂಆರ್ಪಿಎಲ್ನ ಕೋಕರ್ ಹೈಡೋಟ್ರೇಟರ್ ಯುನಿಟ್ನಲ್ಲಿ ಸಂಭವಿಸಿದ ಸ್ಫೋಟದ ಘಟನೆಯಲ್ಲಿ ಮೃತಪಟ್ಟ 23 ವರ್ಷದ ಕಾರ್ಮಿಕ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ಒಟ್ಟು ₹1.20 ಕೋಟಿ ಮೊತ್ತದ ಪರಿಹಾರ ನೀಡಲು ಸಂಸ್ಥೆ ನಿರ್ಧರಿಸಿದೆ.ಎಂದು ಎಂಆರ್ಪಿಎಲ್ ತಿಳಿಸಿದೆ.
ಮನೀಶ್ ಕರ್ಕಡ ಅವರ ಸಾವಿಗೆ ಸಂತಾಪ ಸೂಚಿಸಿರುವ ಸಂಸ್ಥೆ, ಕುಟುಂಬದ ಸಂಕಷ್ಟದ ಸಂದರ್ಭದಲ್ಲಿ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದೆ.
ಎಂಆರ್ಪಿಎಲ್ ವತಿಯಿಂದ ₹90 ಲಕ್ಷ ಆರ್ಥಿಕ ನೆರವು, ಗ್ರೂಪ್ ಟರ್ಮ್ ಲೈಫ್ ಇನ್ಶೂರೆನ್ಸ್ ಅಡಿಯಲ್ಲಿ ₹10 ಲಕ್ಷ ಹಾಗೂ ವರ್ಕ್ಮೆನ್ ಕಾಂಪೆನ್ಸೆಷನ್ ಪಾಲಿಸಿಯಡಿ ಸುಮಾರು ₹20 ಲಕ್ಷ ಸೇರಿದಂತೆ ಒಟ್ಟು ₹1.20 ಕೋಟಿ ಪರಿಹಾರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ, ಗುತ್ತಿಗೆ ಕಾರ್ಮಿಕರಿಗೆ ಮೆಡಿಕೇಮ್ ವಿಮೆ ಒದಗಿಸುವ ಕುರಿತು ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ದಕ್ಷಿಣ ಕನ್ನಡ ಸಂಸದರು ಹಾಗೂ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿದ ಬಳಿಕ ಈ ವ್ಯವಸ್ಥೆಯನ್ನು ಅಂತಿಮಗೊಳಿಸಲಾಗುವುದು. ಸುಮಾರು ನಾಲ್ಕು ವಾರಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ಸಂಸ್ಥೆ ತಿಳಿಸಿದೆ.
ಸಿಬ್ಬಂದಿಯ ಸುರಕ್ಷತೆ, ಆರೋಗ್ಯ ಹಾಗೂ ಕಲ್ಯಾಣಕ್ಕೆ ಸಂಸ್ಥೆ ಬದ್ಧವಾಗಿದ್ದು, ಘಟನೆಯಿಂದ ಬಾಧಿತ ಕುಟುಂಬಕ್ಕೆ ಮುಂದೆಯೂ ಅಗತ್ಯ ನೆರವು ನೀಡುವುದಾಗಿ ಎಂಆರ್ಪಿಎಲ್ ಪ್ರಕಟಣೆಯಲ್ಲಿ ಹೇಳಿದೆ.

