ದುಬೈ: ಯುಎಇಯ ಕ್ರೀಡಾ ಸಂಘಟಕ ನೊಯಲ್ ಡಿ. ಅಲ್ಮೆಡಾ ಅವರ ನೇತೃತ್ವದ ನ್ಯೂ ಮಾರ್ಕ್ ಮಂಗಳೂರು ತಂಡದ ವತಿಯಿಂದ ಸೆಪ್ಟೆಂಬರ್ 4ರಂದು ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ನಗರದ ಟಾಸ್ ಅಕಾಡೆಮಿ ಮೈದಾನದಲ್ಲಿ ಬೆಳಗ್ಗೆ 9 ಗಂಟೆಯಿಂದ ಪಂದ್ಯಾಟ ನಡೆಯಲಿದೆ.
ಪಂದ್ಯಾವಳಿಯಲ್ಲಿ ಯುಎಇಯ ವಿವಿಧ ಭಾಗಗಳ 18 ತಂಡಗಳು ಭಾಗವಹಿಸಲಿವೆ. ಯುಎಇಯಲ್ಲಿರುವ ತುಳು ಹಾಗೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಎಂದು ನೊಯಲ್ ಡಿ.ಅಲ್ಮೆಡಾ ಮನವಿ ಮಾಡಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ನೊಯಲ್ ಡಿ. ಅಲ್ಮೆಡಾ ಅವರು ತುಳು ಕೂಟ ದುಬೈ, ಕರ್ನಾಟಕ ಸಂಘ ಶಾರ್ಜಾ, ಮಂಗಳೂರು ಕೊಂಕಣ್ಸ್, ಡೈಜಿ ರಂಗಮಂದಿರ ಸೇರಿದಂತೆ ಹಲವು ಸಂಘ-ಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಕರ್ನಾಟಕ ಸಂಘ ದುಬೈ ಹಾಗೂ ಸಂಗಮ ಕಲಾವಿದರು ದುಬೈ ಸಂಘಟನೆಗಳ ಮೂಲಕವೂ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇಂಡಿಯನ್ ಕಬಡ್ಡಿ ಆರ್ಗನೈಸರ್ ಸಂಸ್ಥೆಯಲ್ಲಿ 2023-24ನೇ ಸಾಲಿನಲ್ಲಿ ಎರಡು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅವರು, ಯುಎಇಯ ಕಬಡ್ಡಿ ಆಟಗಾರರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ರೋಷನ್ ಪಿಂಟೋ, ರಾಕೇಶ್ ಹೆಗ್ಡೆ, ತಾರಾನಾಥ ರೈ, ಅನಿಲ್ ಪತ್ರವೊ ಹಾಗೂ ಸುನೀಲ್ ಡಿ. ಸೋಜಾ ಅವರೊಂದಿಗೆ ಸೇರಿ ನ್ಯೂ ಮಾರ್ಕ್ ಕಬಡ್ಡಿ ತಂಡವನ್ನು ಸ್ಥಾಪಿಸಿದ್ದಾರೆ.
ವಿಜಯಕುಮಾರ್ ಶೆಟ್ಟಿ ಗಾಣದಮೂಲೆ, ದುಬೈ

