ಮಂಗಳೂರು, ಅ.2: ಶಕ್ತಿನಗರದ ಸಾನಿಧ್ಯ ಸಮೂಹ ಸಂಸ್ಥೆಗಳ ವತಿಯಿಂದ ಗಾಂಧಿ ಜಯಂತಿ ಹಾಗೂ ಪೋಷಕರ–ಶಿಕ್ಷಕರ ಸಭೆ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಕದ್ರಿಯ ನ್ಯೂರೋನೋವಾ ಫಿಸಿಕಲ್ ರಿಹ್ಯಾಬಿಲಿಟೇಶನ್ ಸೆಂಟರ್ನ ಸಂಸ್ಥಾಪಕಿ ಡಾ. ವಿನಾಂತಿ ರೈ ಮಾತನಾಡಿ, ವಿಶೇಷ ಅಗತ್ಯಗಳಿರುವ ಮಕ್ಕಳನ್ನು ಅವರ ರೋಗನಿರ್ಣಯದಿಂದ ಗುರುತಿಸದೆ, ಸಾಮರ್ಥ್ಯ ಮತ್ತು ಸಾಧನೆಯ ಆಧಾರದಲ್ಲಿ ಬೆಳೆಸಬೇಕು. ಸಣ್ಣ ಗೆಲುವುಗಳನ್ನು ಗುರುತಿಸಿ, ಮಕ್ಕಳಿಗೆ ಸ್ವತಃ ಊಟ, ಬಟ್ಟೆ ಧರಿಸುವುದು, ಶೂ ಹಾಕಿಕೊಳ್ಳುವುದು ಸೇರಿದಂತೆ ದೈನಂದಿನ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು. ಇದರಿಂದ ಅವರ ಸ್ವಾವಲಂಬನೆ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಏಕೀಕರಣ ಹೆಚ್ಚುತ್ತದೆ ಎಂದರು.
ಸಾನಿಧ್ಯ ವಸತಿ ಶಾಲೆ ಮತ್ತು ತರಬೇತಿ ಕೇಂದ್ರದ ಸ್ಥಾಪಕ ಹಾಗೂ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ ಮಾತನಾಡಿ, ಆಟಿಸಂ, ಡಿಸ್ಲೆಕ್ಸಿಯಾ ಹಾಗೂ ಕಲಿಕಾ ಅಸಾಮರ್ಥ್ಯ ಹೊಂದಿರುವ ಮಕ್ಕಳಿಗೆ ವ್ಯವಸ್ಥಿತ ಶಿಕ್ಷಣ ಮತ್ತು ತರಬೇತಿ ನೀಡುವ ಸಂಸ್ಥೆಯಾಗಿ ಸಾನಿಧ್ಯ 25ನೇ ವರ್ಷಕ್ಕೆ ಕಾಲಿಟ್ಟಿದೆ. ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸುಸಜ್ಜಿತ ಡೈನಿಂಗ್ ಹಾಲ್ ಸೇರಿದಂತೆ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸುವ ಯೋಜನೆ ಇದೆ ಎಂದರು.
ವಿಶೇಷ ಚೇತನ ಮಗುವಿನ ತಂದೆ ಅನಂತ್ ಕುಮಾರ್ ಮಾತನಾಡಿ, ಸಾನಿಧ್ಯದಲ್ಲಿ ಈಜುಕೊಳ, ಸಂವಾದಾತ್ಮಕ ಕಲಿಕೆ ಸೇರಿದಂತೆ ಹಲವು ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಶಿಕ್ಷಕರು ಮಕ್ಕಳ ಅಭಿವೃದ್ಧಿಗೆ ಸಮರ್ಪಣೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ತಾಯಿ ದಿವ್ಯಾ ಗೋಕುಲ್ ಮಾತನಾಡಿ, ಈಜು, ಸಂಗೀತ, ನೃತ್ಯ, ಕಲೆ, ಕರಕುಶಲ ಹಾಗೂ ವಿವಿಧ ವೃತ್ತಿಪರ ತರಬೇತಿಗಳಿಗೆ ಅವಕಾಶ ನೀಡುವ ಮೂಲಕ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಣೇಶ್ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ, ಪ್ರಮುಖರಾದ ಉಷಾ ವಿ.ಎಸ್ ಶೆಟ್ಟಿ, ವಿಜಯ ಸುಧೀರ್ ಶೆಟ್ಟಿ, ದಿವ್ಯಾ ಡಿ ಬಾಳಿಗ, ಲ /ಎರಿಕ್ ಜಾನ್ ಬ್ಯಾಪ್ಟಿಸ್ಟ್ ಡಿಸೋಜಾ ಉಪಸ್ಥಿತರಿದ್ದರು. ಸಾನಿಧ್ಯ ಸಂಸ್ಥೆಯ ಪ್ರಾಂಶುಪಾಲೆ ಮೀನಾಕ್ಷಿ ಎಂ.ಕೆ. ವಂದಿಸಿದರು.ಸುಮಾ ಡಿ. ಸಿಲ್ವಾ ಕಾರ್ಯಕ್ರಮ ನಿರೂಪಿಸಿದರು

