ನಿಸ್ಶಿನ್ (ಜಪಾನ್): 2026ರ ಏಷ್ಯಾನ್ ಗೇಮ್ಸ್ ಪುರುಷರ ಟಿ20 ಕ್ರಿಕೆಟ್ ಫೈನಲ್ನಲ್ಲಿ ಪಾಕಿಸ್ತಾನವನ್ನು 19 ರನ್ಗಳಿಂದ ಮಣಿಸಿದ ಭಾರತ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಈ ಗೆಲುವಿನೊಂದಿಗೆ ಭಾರತ ಏಷ್ಯನ್ ಗೇಮ್ಸ್ನಲ್ಲಿ ಪುರುಷರ ಕ್ರಿಕೆಟ್ನಲ್ಲಿ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ನಿಸ್ಶಿನ್ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ 211 ರನ್ ಬೃಹತ್ ಮೊತ್ತವನ್ನು ದಾಖಲಿಸಿ, ಪಾಕಿಸ್ತಾನವನ್ನು 192/6ಕ್ಕೆ ನಿಯಂತ್ರಿಸಿತು.

ಟಾಸ್ ಗೆದ್ದ ಭಾರತದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭದಲ್ಲೇ ಭಾರತ ಆಕ್ರಮಣಕಾರಿ ಆಟಗಾರ ಅಭಿಷೇಕ್ ಶರ್ಮಾ ಪಾಕಿಸ್ತಾನದ ಬೌಲರ್ಗಳ ಮೇಲೆ ಸಿಡಿಲಬ್ಬರದ ದಾಳಿ ನಡೆಸಿ ಕೇವಲ 28 ಎಸೆತ ಎದುರಿಸಿ 61 ರನ್ಗಳಿಸಿದರು. ಅವರ ಸ್ಫೋಟಕ ಇನ್ನಿಂಗ್ಸ್ನಲ್ಲಿ 3 ಬೌಂಡರಿ ಹಾಗೂ 7 ಸಿಕ್ಸರ್ಗಳು ಸೇರಿದ್ದವು

ವೈಭವ್ ಸೂರ್ಯವಂಶಿ 15 ರನ್ಗಳಿಸಿ ಔಟಾದರೆ, ಸಂಜು ಸ್ಯಾಮ್ಸನ್ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಅಭಿಷೇಕ್ ಶರ್ಮಾ ವೇಗವಾಗಿ ಅರ್ಧಶತಕ ಪೂರೈಸಿ ಭಾರತದ ರನ್ಗತಿಯನ್ನು ಹೆಚ್ಚಿಸಿದರು. ನಂತರ ಮಧ್ಯಮ ಕ್ರಮಾಂಕದಲ್ಲಿ ಆಟಗಾರರು ಕಳಪೆ ಪ್ರದರ್ಶನ ನೀಡಿದರೂ ತಿಲಕ್ ವರ್ಮಾ ಮತ್ತು ಶಿವಂ ದುಬೆ ಅಂತಿಮ ಹಂತದಲ್ಲಿ ಬಿರುಸಿನ ಆಟವಾಡಿದರು.

ತಿಲಕ್ ವರ್ಮಾ ಕೇವಲ 22 ಎಸೆತಗಳನ್ನು ಎದುರಿಸಿ ಅಜೇಯ 51 ರನ್ ಗಳಿಸಿದರೆ ಶಿವಂ ದುಬೆ 15 ಬಾಲ್ ಎದುರಿಸಿ 27 ರನ್ಗಳ ಕೊಡುಗೆ ನೀಡಿದರು. ಇವರ ನೆರವಿನಿಂದ ಭಾರತ 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತು. ಇದು ಈ ಬಾರಿಯ ಏಷ್ಯನ್ ಗೇಮ್ಸ್ ಕ್ರಿಕೆಟ್ ಪಂದ್ಯದಲ್ಲಿ ದಾಖಲಾದ ಅತ್ಯಧಿಕ ತಂಡದ ಮೊತ್ತವಾಗಿತ್ತು

ಪಾಕಿಸ್ತಾನದ ಹೋರಾಟ :211 ರನ್ಗಳ ಬೆನ್ನತ್ತಿದ ಪಾಕಿಸ್ತಾನಕ್ಕೆ ಆರಂಭದಲ್ಲೇ ಭಾರತದ ಬೌಲರ್ಗಳು ಒತ್ತಡ ಹೇರಿದರು. ಪಾಕಿಸ್ತಾನ ಒಂದು ಹಂತದಲ್ಲಿ 39 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಆದರೆ ಪಾಕ್ ಪರ ಹಸನ್ ನವಾಜ್ ಕೇವಲ 51ಎಸೆತ ಎದುರಿಸಿ 96 ರನ್ ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ 5 ಬೌಂಡರಿ ಮತ್ತು 7 ಸಿಕ್ಸರ್ಗಳು ಇದ್ದವು.ಅವರಿಗೆ ಸೈಮ್ ಅಯೂಬ್ ಸಾಥ್ ನೀಡಿದರು

ಆದರೆ ಭಾರತದ ಬೌಲರ್ಗಳು ನಿರ್ಣಾಯಕ ಹಂತದ ಪಂದ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಶಿವಂ ದುಬೆ ಸೈಮ್ ಅಯೂಬ್ ಅವರನ್ನು ಔಟ್ ಮಾಡುವ ಮೂಲಕ ಪ್ರಮುಖ ಜೊತೆಯಾಟ ಮುರಿದರು. ಬಳಿಕ ಭಾರತದ ಬೌಲಿಂಗ್ ದಾಳಿ ಪಾಕಿಸ್ತಾನದ ರನ್ಗತಿಯನ್ನು ನಿಯಂತ್ರಿಸಿತು. ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ತಲಾ ಎರಡು ವಿಕೇಟ್ಗಳನ್ನು ಪಡೆದರು

ಕೊನೆಯ ಭಾಗಕ್ಕೆ ಪಾಕಿಸ್ತಾನಕ್ಕೆ ಗೆಲುವಿಗಾಗಿ ಭಾರೀ ಮೊತ್ತದ ರನ್ಗಳ ಅಗತ್ಯವಿತ್ತು. ಅಂತಿಮ ಹಂತದಲ್ಲಿ ಹಸನ್ ನವಾಜ್ ಔಟಾಗುವುದರೊಂದಿಗೆ ಪಾಕಿಸ್ತಾನದ ಹೋರಾಟ ಅಂತ್ಯಗೊಂಡಿತು. ಕೊನೆಯದಾಗಿ ಪಾಕಿಸ್ತಾನ 20 ಓವರುಗಳಲ್ಲಿ 6 ವಿಕೇಟ್ ನಷ್ಟಕ್ಕೆ192 ರನ್ಗಳನ್ನು ತೆಗೆಯಲಷ್ಟೇ ಶಕ್ತವಾಯಿತು. ಪರಿಣಾಮ ಭಾರತ 19 ರನ್ಗಳ ಜಯ ದಾಖಲಿಸಿತು.

ಈ ಗೆಲುವಿನಲ್ಲಿ 2026ರ ಏಷ್ಯನ್ ಗೇಮ್ಸ್ನಲ್ಲಿ ಕ್ರಿಕೆಟ್ನಲ್ಲಿ ಭಾರತ ಪುರುಷ ಮತ್ತು ಮಹಿಳಾ ವಿಭಾಗಗಳೆರಡರಲ್ಲೂ ಚಿನ್ನದ ಪದಕ ಗೆದ್ದಿದ್ದಾರೆ. ಸೆಪ್ಟೆಂಬರ್ 22 ರಂದು ನಡೆದ ಮಹಿಳಾ ಕ್ರಿಕೆಟ್ ಫೈನಲ್ನಲ್ಲಿ ಭಾರತ ಶ್ರೀಲಂಕಾವನ್ನು ಸೋಲಿಸಿ ಚಿನ್ನ ಗೆದ್ದಿತ್ತು. ಇದೀಗ ಪುರುಷರ ತಂಡವೂ ಪಾಕಿಸ್ತಾನವನ್ನು ಮಣಿಸುವ ಮೂಲಕ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ತಂದುಕೊಟ್ಟಿದೆ.

ಭಾರತ : ಸ್ಕೋರ್:– 211/6 (20)
ಅಭಿಷೇಕ್ ಶರ್ಮಾ – 61, ತಿಲಕ್ ವರ್ಮಾ – 51*
ಪಾಕಿಸ್ತಾನ – 192/6 (20)
ಹಸನ್ ನವಾಜ್ – 96
ಫಲಿತಾಂಶ: ಭಾರತಕ್ಕೆ 19 ರನ್’ಗಳ ಜಯ; ಚಿನ್ನದ ಪದಕ.

