ಮಂಗಳೂರು, ಅ.3: ನಗರದಲ್ಲಿ ಹಗಲು ವೇಳೆಯಲ್ಲಿ ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ ಆರೋಪದ ಮೇಲೆ ದೆಹಲಿ ಮೂಲದ ಇಬ್ಬರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹18 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಇತರ ಕಳವು ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸೆ.28ರಂದು ಅಳಕೆ ಕಂಬ್ಲ ಕ್ರಾಸ್ ರಸ್ತೆಯ ಸಹಯೋಗ ರೆಸಿಡೆನ್ಸಿಯ ಮನೆಯೊಂದರ ನಿವಾಸಿಗಳು ಮಧ್ಯಾಹ್ನ ಮನೆಗೆ ಬೀಗ ಹಾಕಿಕೊಂಡು ಹೊರಗೆ ತೆರಳಿದ್ದರು. ಸಂಜೆ ವಾಪಸ್ ಬಂದಾಗ ಮನೆಯ ಮುಂಭಾಗದ ಬಾಗಿಲಿನ ಕೊಂಡಿ ಮುರಿದಿರುವುದು ಕಂಡುಬಂದಿದ್ದು, ಒಳನುಗ್ಗಿದ್ದ ಕಳ್ಳರು ಸುಮಾರು ₹14 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ವಾಚ್ ಹಾಗೂ ಟ್ರಾಲಿ ಬ್ಯಾಗ್ಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸೆ.27ರಂದು ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬೊಕ್ಕಪಟ್ಣ ರಸ್ತೆಯ ಮನೆಯೊಂದರಲ್ಲಿಯೂ ಕಳ್ಳತನಕ್ಕೆ ಯತ್ನಿಸಲಾಗಿತ್ತು. ಮನೆಯ ಲಾಕರ್ ಒಡೆದಿದ್ದರೂ ಯಾವುದೇ ಬೆಲೆಬಾಳುವ ವಸ್ತು ದೊರೆಯದ ಹಿನ್ನೆಲೆಯಲ್ಲಿ ಚೆಕ್ ಪುಸ್ತಕಗಳನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎರಡೂ ಪ್ರಕರಣಗಳ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಕಳ್ಳತನದ ಬಳಿಕ ಆರೋಪಿಗಳು ರೈಲಿನಲ್ಲಿ ದೆಹಲಿ ಕಡೆಗೆ ತೆರಳುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಗುಜರಾತ್ನ ವಡೋದರಾ ಪೊಲೀಸರ ಸಹಕಾರ ಪಡೆಯಲಾಯಿತು.
ಮಂಗಳೂರು ಪೊಲೀಸರ ವಿಶೇಷ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಾದ 24 ಗಂಟೆಗಳೊಳಗೆ ಸೆ.29ರಂದು ವಡೋದರಾದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಆರೋಪಿಗಳಿಂದ ಕಳವು ಮಾಡಲಾಗಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಅರ್ಮಾನ್ ಖಾನ್ ಅಲಿಯಾಸ್ ಅಮನ್ ಸೋನಿ (34), ದೆಹಲಿಯ ಗೋಕುಲ್ ಪುರಿ ನಿವಾಸಿ, ಹಾಗೂ ಸಂಜೀವ್ ಕುಮಾರ್ ಅಲಿಯಾಸ್ ಜಾನಿ (34), ನವದೆಹಲಿಯ ಸುಲ್ತಾನ್ ಪುರಿ ನಿವಾಸಿ ಎಂದು ಗುರುತಿಸಲಾಗಿದೆ.
ಬಂಧಿತರ ಪೈಕಿ ಅರ್ಮಾನ್ ಖಾನ್ ವಿರುದ್ಧ ದೆಹಲಿ, ಮುಂಬೈ, ಬೆಂಗಳೂರು, ಗೋವಾ ಹಾಗೂ ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಲ್ಲಿ 40ಕ್ಕೂ ಅಧಿಕ ಮನೆಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ವಿರುದ್ಧ ವಾರಂಟ್ ಹಾಗೂ ಪ್ರೊಕ್ಲಮೇಶನ್ ಬಾಕಿ ಇರುವುದಾಗಿ ತಿಳಿದುಬಂದಿದ್ದು, ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ.
ಆರೋಪಿಗಳನ್ನು ವಡೋದರಾದಿಂದ ಮಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮುಂದಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


