ಮಂಗಳೂರು : ಎಂ.ಜಿ. ಹೆಗಡೆ ರಚಿಸಿರುವ ‘ಲವ್ ಜಿಹಾದ್ ಮತ್ತು ಮತಾಂತರ (ಪ್ರಚಾರ ಮತ್ತು ವಾಸ್ತವ)’ ಪುಸ್ತಕವು ಅ.6ರಂದು ಮಂಗಳೂರಿನ ಪುರಭವನದಲ್ಲಿ ಬಿಡುಗಡೆಯಾಗಲಿದೆ ಎಂದು ಪುಸ್ತಕ ಬಿಡುಗಡೆ ಸಮಿತಿ ಅಧ್ಯಕ್ಷ, ವಕೀಲ ಯಶವಂತ ಮರೋಳಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳ ಅವಧಿಯಲ್ಲಿ ಲವ್ ಜಿಹಾದ್, ಮತಾಂತರ, ಮದರಸಗಳಲ್ಲಿ ಭಯೋತ್ಪಾದನೆ ಸೇರಿದಂತೆ ವಿವಿಧ ಆರೋಪಗಳಿಗೆ ಸಂಬಂಧಿಸಿದ ದೂರು–ಮನವಿಗಳ ಮಾಹಿತಿಯನ್ನು 14 ಜಿಲ್ಲೆಗಳ ಸುಮಾರು 350 ಪೊಲೀಸ್ ಠಾಣೆಗಳಿಂದ ಆರ್ಟಿಐ ಮೂಲಕ ಸಂಗ್ರಹಿಸಿ ಕೃತಿಯಲ್ಲಿ ದಾಖಲಿಸಲಾಗಿದೆ ಎಂದರು. ರಾಜ್ಯ ಗೃಹ ಇಲಾಖೆಗೆ ಸಲ್ಲಿಕೆಯಾದ ದೂರುಗಳ ವಿವರ, ದೇಶದಲ್ಲಿ ಉಲ್ಲೇಖಿಸಲಾದ 11 ಲವ್ ಜಿಹಾದ್ ಪ್ರಕರಣಗಳ ತನಿಖೆ ಹಾಗೂ ನ್ಯಾಯಾಲಯದ ತೀರ್ಪುಗಳ ಮಾಹಿತಿಯನ್ನೂ ಕೃತಿಯಲ್ಲಿ ನೀಡಲಾಗಿದೆ ಎಂದು ಹೇಳಿದರು.

ಕರಾವಳಿಯಲ್ಲಿ ಕೋಮು ಕಾರಣಕ್ಕೆ ನಡೆದ ಕೊಲೆ ಪ್ರಕರಣಗಳ ತನಿಖೆಯ ಅಂತಿಮ ಸ್ಥಿತಿ ಸೇರಿದಂತೆ ಹಲವು ದಾಖಲೆಗಳನ್ನು ಲೇಖಕರು ಒಂದು ವರ್ಷ ಕಾಲ ಸಂಗ್ರಹಿಸಿ ಕೃತಿ ರೂಪಿಸಿದ್ದಾರೆ. ಎಂ.ಜಿ. ಹೆಗಡೆ ಅವರು ‘ಮಿನುಗು ನೋಟ’, ‘ಚಿಮಣಿ ಬೆಳಕಿನಿಂದ’, ‘ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ ಎಂದರು.
ಅ.6ರಂದು ಮಧ್ಯಾಹ್ನ 3.30ಕ್ಕೆ ದಾಖಲೆಗಳ ಪ್ರದರ್ಶನ ಉದ್ಘಾಟನೆ ಹಾಗೂ ಸಂಜೆ 5.30ಕ್ಕೆ ಪುಸ್ತಕ ಬಿಡುಗಡೆ ನಡೆಯಲಿದೆ. ಲಕ್ಷ್ಮೀಶ ಗಬ್ಬಲಡ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸುಧೀರ್ ಮುರೊಳ್ಳಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಪ್ರವೀಣ್ ವಾಲ್ಕೆ ದಾಖಲೆಗಳ ಪ್ರದರ್ಶನ ಉದ್ಘಾಟಿಸಲಿದ್ದಾರೆ. ‘ಶರಸೇತು ಬಂಧನ’ ತಾಳಮದ್ದಳೆ ನಡೆಯಲಿದ್ದು, ವಿವಿಧ ಗಣ್ಯರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪುಸ್ತಕ ಬಿಡುಗಡೆ ಸಮಿತಿ ಪ್ರಮುಖರಾದ ಚಿತ್ತರಂಜನ್ ಶೆಟ್ಟಿ, ರವಿ ಪೂಜಾರಿ ಸೂರಿಂಜೆ, ಯೋಗೀಶ್ ನಾಯಕ್ ಹಾಗೂ ಮಂಜುಳಾ ನಾಯಕ್ ಉಪಸ್ಥಿತರಿದ್ದರು.

