ಅಬುಧಾಬಿ, ಅ.3: ವಿಮಾನದ ಕಾಕ್ಪಿಟ್ನಲ್ಲಿ ಎದುರಾದ ಅಪಾಯಕಾರಿ ಪರಿಸ್ಥಿತಿಯ ನಡುವೆಯೂ ಕರ್ತವ್ಯದಿಂದ ಹಿಂದೆ ಸರಿಯದೆ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ.

ಫ್ಲೈದುಬೈ ವಿಮಾನದಲ್ಲಿ ನಡೆದ ಗಂಭೀರ ಘಟನೆಯ ವೇಳೆ ಸ್ಮಿತ್ ಮಚ್ಚರ್ ಗಾಯಗೊಂಡಿದ್ದರು. ಆದರೂ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಅವರು ತೋರಿದ ಧೈರ್ಯ ಮತ್ತು ಜವಾಬ್ದಾರಿಯುತ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ವಿಮಾನದಲ್ಲಿದ್ದ 174 ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ವರದಿಯಾಗಿದೆ.
ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಯುಎಇ ಉಪ ಪ್ರಧಾನಿ ಹಾಗೂ ದುಬೈ ಯುವರಾಜ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಶನಿವಾರ ಭೇಟಿ ಮಾಡಿದರು. ಪೈಲಟ್ ಅವರ ಆರೋಗ್ಯ ವಿಚಾರಿಸಿದ ಅವರು, ಸಂಕಷ್ಟದ ಸಂದರ್ಭದಲ್ಲಿ ತೋರಿದ ಧೈರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

‘ನಿಮ್ಮ ಬಗ್ಗೆ ಹೆಮ್ಮೆಯಿದೆ’ ಎಂದು ಹೇಳಿದ ಶೇಖ್ ಹಮ್ದಾನ್, ಯುಎಇ ನಾಯಕತ್ವದ ಪರವಾಗಿ ಸ್ಮಿತ್ ಮಚ್ಚರ್ ಅವರಿಗೆ ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸಿದರು. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿರುವುದು ಪ್ರಶಂಸನೀಯ ಎಂದು ಅವರು ಹೇಳಿದರು.
ಗುಜರಾತ್ ಮೂಲದ ಸ್ಮಿತ್ ಮಚ್ಚರ್ ಈ ಹಿಂದೆ ಸ್ಪೈಸ್ಜೆಟ್ನಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಫ್ಲೈದುಬೈನಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಮಾನದಲ್ಲಿನ ಘಟನೆಯ ಬಳಿಕ ಅವರ ಧೈರ್ಯ ಮತ್ತು ಕರ್ತವ್ಯನಿಷ್ಠೆಗೆ ವಿವಿಧ ವಲಯಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಕೂಡ ಸ್ಮಿತ್ ಮಚ್ಚರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅವರ ಧೈರ್ಯವನ್ನು ಶ್ಲಾಘಿಸಿದ್ದರು. ಇದೀಗ ಯುಎಇ ಯುವರಾಜರು ಆಸ್ಪತ್ರೆಗೆ ತೆರಳಿ ನೇರವಾಗಿ ಭೇಟಿ ನೀಡಿರುವುದು ಪೈಲಟ್ ಅವರ ಸಾಹಸಕ್ಕೆ ದೊರೆತ ಮತ್ತೊಂದು ಪ್ರಮುಖ ಗೌರವವಾಗಿದೆ.

