ಬೆಂಗಳೂರು, ಅ.4: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ, ಚಿತ್ರಕಥೆಗಾರ ಹಾಗೂ ಪ್ರಯೋಗಶೀಲ ಸಿನಿ ಪ್ರತಿಭೆ ಸಿಂಗೀತಂ ಶ್ರೀನಿವಾಸ ರಾವ್ (95) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ 10.30ರ ಸುಮಾರಿಗೆ ಕೊನೆಯುಸಿರೆಳೆದರು.
ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲೂ ತಮ್ಮದೇ ಛಾಪು ಮೂಡಿಸಿದ್ದ ಸಿಂಗೀತಂ ಶ್ರೀನಿವಾಸ ರಾವ್ ಅವರು ಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. 60ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶಿಸಿರುವ ಅವರು, ವಿಭಿನ್ನ ಕಥಾವಸ್ತು ಮತ್ತು ಹೊಸತನದ ನಿರೂಪಣೆಯ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.

1931ರ ಸೆಪ್ಟೆಂಬರ್ 21ರಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಉದಯಗಿರಿಯಲ್ಲಿ ಜನಿಸಿದ ಅವರು, ನಿರ್ದೇಶನದ ಜೊತೆಗೆ ಚಿತ್ರಕಥೆ ಹಾಗೂ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಪ್ರಯೋಗಶೀಲತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದ ಅವರ ನಿರ್ದೇಶನದ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ವಿಭಿನ್ನ ಸ್ಥಾನ ಪಡೆದಿವೆ.
ಕನ್ನಡ ಚಿತ್ರರಂಗದಲ್ಲಿ ಸಿಂಗೀತಂ ಶ್ರೀನಿವಾಸ ರಾವ್ ಅವರ ಕೊಡುಗೆ ಗಮನಾರ್ಹವಾಗಿದೆ. ಡಾ. ರಾಜ್ಕುಮಾರ್ ಅಭಿನಯದ ‘ಚಲಿಸುವ ಮೋಡಗಳು’, ‘ಹಾಲು ಜೇನು’, ‘ಭಾಗ್ಯದ ಲಕ್ಷ್ಮೀ ಬಾರಮ್ಮ’, ‘ಎರಡು ನಕ್ಷತ್ರಗಳು’, ‘ಶ್ರಾವಣ ಬಂತು’ ಹಾಗೂ ‘ಶ್ರುತಿ ಸೇರಿದಾಗ’ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಿಗೆ ಅವರು ನಿರ್ದೇಶನ ನೀಡಿದ್ದರು.
ಶಿವರಾಜ್ಕುಮಾರ್ ಅವರನ್ನು ನಾಯಕ ನಟನಾಗಿ ಪರಿಚಯಿಸಿದ ‘ಆನಂದ್’ ಚಿತ್ರವೂ ಸಿಂಗೀತಂ ಅವರ ನಿರ್ದೇಶನದ ಪ್ರಮುಖ ಚಿತ್ರಗಳಲ್ಲಿ ಒಂದಾಗಿದೆ. ಇದರೊಂದಿಗೆ ‘ಪುಷ್ಪಕ ವಿಮಾನ’, ‘ಆದಿತ್ಯ 369’, ‘ಭೈರವ ದ್ವೀಪಂ’ ಸೇರಿದಂತೆ ಹಲವು ವಿಭಿನ್ನ ಚಿತ್ರಗಳನ್ನು ಅವರು ನೀಡಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಅಭಿನಯದ ‘ಚಿರಂಜೀವಿ ಸುಧಾಕರ್’ ಹಾಗೂ ಜಗ್ಗೇಶ್ ಅಭಿನಯದ ‘ಮೇಕಪ್’ ಚಿತ್ರಗಳಿಗೂ ಅವರು ನಿರ್ದೇಶನ ನೀಡಿದ್ದರು.
1988ರಲ್ಲಿ ಬಿಡುಗಡೆಯಾದ ‘ಪುಷ್ಪಕ ವಿಮಾನ’ ಚಿತ್ರದ ಮೂಲಕ ಸಂಭಾಷಣೆಯೇ ಇಲ್ಲದೆ ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ಹೊಸ ಪ್ರಯೋಗಕ್ಕೆ ಮುಂದಾದ ಸಿಂಗೀತಂ, ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ನಿರ್ದೇಶನ ಶೈಲಿಯನ್ನು ರೂಪಿಸಿಕೊಂಡಿದ್ದರು.
ಅವರ ಸಿನಿ ಸೇವೆಗೆ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಮೂರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ನಂದಿ ಪ್ರಶಸ್ತಿ ಹಾಗೂ ಫಿಲ್ಮ್ಫೇರ್ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.
95ನೇ ವಯಸ್ಸಿನಲ್ಲೂ ಚಿತ್ರ ನಿರ್ದೇಶನದ ಆಸಕ್ತಿ ಉಳಿಸಿಕೊಂಡಿದ್ದ ಸಿಂಗೀತಂ ಶ್ರೀನಿವಾಸ ರಾವ್ ಅವರ ನಿಧನದಿಂದ ಭಾರತೀಯ ಚಿತ್ರರಂಗದ ಹಿರಿಯ ಹಾಗೂ ಪ್ರಯೋಗಶೀಲ ನಿರ್ದೇಶಕರೊಬ್ಬರನ್ನು ಕಳೆದುಕೊಂಡಂತಾಗಿದೆ.

