ಕಾಸರಗೋಡು: ಮುಂಬೈನ ಖ್ಯಾತ ಸಂಘಟಕಿ ಹಾಗೂ ಸಮಾಜ ಸೇವಕಿ ಶ್ರೀಮತಿ ಶಶಿಕಲಾ ಶಂಕರ್ ಪೂಂಜಾ ಮತ್ತು ಉಡುಪಿಯ ಡಾ. ರವಿದಾಸ್ ಶೆಟ್ಟಿ ಉಪ್ಪುಂದ ಅವರು 2026ನೇ ಸಾಲಿನ ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಕನ್ನಡ ಭವನದ ಡಾ.ವಾಮನ್ ರಾವ್ ಬೇಕಲ್ ಅವರ ಪ್ರಾಯೋಜಕತ್ವದಲ್ಲಿ ಅಕ್ಟೋಬರ್ 11ರಿಂದ 20 ರವರೆಗೆ ಕಾಸರಗೋಡಿನ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದಸರಾ ವೇದಿಕೆಯಲ್ಲಿ ನಡೆಯಲಿರುವ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ–2026ರ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
ಅಕ್ಟೋಬರ್ 18ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಕಾಸರಗೋಡು ದಸರಾ ರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಇಬ್ಬರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶ್ರೀನಿವಾಸ್ ಬಹದ್ದೋರ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಹಾಗೂ ಚುಟುಕು ಯುಗಾಚಾರ್ಯ ಡಾ. ಎಂ.ಜಿ.ಆರ್.ಅರಸ್ ಉದ್ಘಾಟಿಸಲಿದ್ದಾರೆ.
ಮೇರು ಕವಿ, ಸಾಹಿತಿ ಹಾಗೂ ಸಂಘಟಕ ಡಾ. ಜಯಪ್ಪ ಹೊನ್ನಾಳಿ, ಮೈಸೂರು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾಸರಗೋಡು ದಸರಾ ಕವಿಗೋಷ್ಠಿಯ ಸಂದರ್ಭದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಶಶಿಕಲಾ ಶಂಕರ್ ಪೂಂಜಾ ಮತ್ತು ಡಾ.ರವಿದಾಸ್ ಶೆಟ್ಟಿ ಉಪ್ಪುಂದ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕಾಸರಗೋಡು ದಸರಾ ಪ್ರಧಾನ ಸಂಚಾಲಕ ಹಾಗೂ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಮತ್ತು ಪಾಂಗೋಡು ಕ್ಷೇತ್ರ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಪ್ರವೀಣ್ ನಾಯಕ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

