ಮಂಗಳೂರು: ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕಳೆದ 15 ವರ್ಷಗಳಿಂದ ನೀಡಲಾಗುತ್ತಿರುವ ಪ್ರತಿಷ್ಠಿತ ‘ಕಿಟಾಳ್ ಯುವ ಪುರಸ್ಕಾರ’ಕ್ಕೆ 2026ನೇ ಸಾಲಿನಲ್ಲಿ ಯುವ ಕವಿ ಹಾಗೂ ಕಥೆಗಾರ ಗ್ಲ್ಯಾನಿಶ್ ಮಾರ್ಟಿಸ್ ಭಾಜನರಾಗಿದ್ದಾರೆ.
ಅಲಂಗಾರದ ಗ್ಲ್ಯಾನಿಶ್ ಮಾರ್ಟಿಸ್ ಅವರಿಗೆ ನಗರದ ಎಂಸಿಸಿ ಬ್ಯಾಂಕ್ನ ಎಫ್.ಎಫ್.ಎಕ್ಸ್.ಸಲ್ಡಾನ್ಹಾ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಅಬುಧಾಬಿಯ ಉದ್ಯಮಿ ಹಾಗೂ ಕೊಂಕಣಿ ಭಾಷೆಯ ಬೆಂಬಲಿಗ ಲಿಯೋ ರೊಡ್ರಿಗಸ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ದೇರೆಬೈಲ್ ಧರ್ಮಕೇಂದ್ರದ ಪ್ರಧಾನ ಗುರು ಫಾ. ಜೋಸೆಫ್ ಮಾರ್ಟಿಸ್, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಹಾಗೂ ಕಿಟಾಳ್ ಸಂಪಾದಕ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಿಮರ್ಶಕ ಎಚ್.ಎಂ. ಪೆರ್ನಾಲ್ ಉಪಸ್ಥಿತರಿದ್ದರು. ಕಿಟಾಳ್ ಸಹ ಸಂಪಾದಕ ಕವಿ ವಿಲ್ಸನ್ ಕಟೀಲ್ ಅವರು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿ ಸನ್ಮಾನ ಪತ್ರ ವಾಚಿಸಿದರು.
ಪ್ರಶಸ್ತಿ ಪ್ರದಾನ ಬಳಿಕ ಮಾತನಾಡಿದ ಲಿಯೋ ರೊಡ್ರಿಗಸ್, ಯುವ ಪೀಳಿಗೆಯಲ್ಲಿ ಕೊಂಕಣಿ ಭಾಷೆ, ಸಾಹಿತ್ಯ ಹಾಗೂ ಸಮುದಾಯದ ಬಗ್ಗೆ ಜವಾಬ್ದಾರಿಯುತ ಮನೋಭಾವ ಬೆಳೆಸುವುದು ಪುರಸ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದರು. ಕೊಂಕಣಿ ಸಾಹಿತ್ಯದಲ್ಲಿ ಯುವ ಬರಹಗಾರರ ಸಂಖ್ಯೆ ಹೆಚ್ಚಬೇಕಾದ ಅಗತ್ಯವಿದ್ದು, ಯುವಕರನ್ನು ಸಾಹಿತ್ಯದತ್ತ ಸೆಳೆಯಲು ಹಿರಿಯ ಸಾಹಿತಿಗಳು ಕಾರ್ಯಾಗಾರ ಹಾಗೂ ಸಾಹಿತ್ಯ ಶಿಬಿರಗಳನ್ನು ಆಯೋಜಿಸಿದರೆ ತಮ್ಮಿಂದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೊಂಕಣಿ ಭಾಷೆ ಮತ್ತು ಕಲಾ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿರುವ ಹಿರಿಯ ಸಾಧಕರಾದ ಡಾ. ಎವ್ಜಿನ್ ಡಿ’ಸೋಜಾ, ಮೂಡುಬೆಳ್ಳೆ ಹಾಗೂ ಎಡ್ಡಿ ಸಿಕ್ವೇರಾ ಅವರನ್ನು ಕ್ರಮವಾಗಿ 80ನೇ ಹಾಗೂ 75ನೇ ಜನ್ಮದಿನದ ಅಂಗವಾಗಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಫಾ. ಜೋಸೆಫ್ ಮಾರ್ಟಿಸ್ ಅವರು ಅರಿಸ್ಟಾಟಲ್ನ ‘ಆಶ್ಚರ್ಯವೇ ಜ್ಞಾನದ ಆರಂಭ’ ಎಂಬ ಮಾತನ್ನು ಉಲ್ಲೇಖಿಸಿ, ಸಾಹಿತಿಯೊಳಗಿನ ಕುತೂಹಲ ಮತ್ತು ಬೆರಗು ಸೃಜನಶೀಲ ಬರವಣಿಗೆಗೆ ಪ್ರೇರಣೆಯಾಗುತ್ತದೆ ಎಂದರು. ಬರಹಗಾರನು ತನ್ನ ಸುತ್ತಲಿನ ವಾಸ್ತವತೆಯನ್ನು ಗ್ರಹಿಸಿ, ಆಂತರಿಕ ಚಿಂತನೆಗಳನ್ನು ಸಾಹಿತ್ಯದ ಮೂಲಕ ವ್ಯಕ್ತಪಡಿಸುತ್ತಾನೆ. ಉತ್ತಮ ಸಾಹಿತ್ಯದ ಮೂಲಕ ಸಾಹಿತಿ ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತಾನೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಗ್ಲ್ಯಾನಿಶ್ ಮಾರ್ಟಿಸ್ ಅವರು ತಮ್ಮ ಸಾಹಿತ್ಯ ಪಯಣದಲ್ಲಿ ತಂದೆ, ತಾಯಿ ಹಾಗೂ ತಾತ ನೀಡಿದ ಪ್ರೋತ್ಸಾಹವನ್ನು ಕೃತಜ್ಞತೆಯಿಂದ ಸ್ಮರಿಸಿದರು. ಹಿರಿಯ ಕೊಂಕಣಿ ಸಾಹಿತಿಗಳ ಮಾರ್ಗದರ್ಶನವೂ ತಮ್ಮ ಬರವಣಿಗೆಯ ಬೆಳವಣಿಗೆಗೆ ಮಹತ್ವದ ಪಾತ್ರ ವಹಿಸಿದೆ ಎಂದ ಅವರು, ಯುವಜನರಲ್ಲಿ ಓದುವ ಹವ್ಯಾಸ ಬೆಳೆಸುವುದರಿಂದ ಬರವಣಿಗೆಯ ಮೇಲಿನ ಆಸಕ್ತಿಯೂ ಹೆಚ್ಚಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕಿಟಾಳ್ ಯುವ ಪುರಸ್ಕಾರ ತಮ್ಮ ಸಾಹಿತ್ಯ ಪಯಣಕ್ಕೆ ಹೊಸ ಪ್ರೇರಣೆ ನೀಡುವುದರ ಜೊತೆಗೆ ಹೆಚ್ಚಿನ ಜವಾಬ್ದಾರಿಯನ್ನೂ ನೀಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ಸಲಹಾ ಸಮಿತಿ ಮುಖ್ಯಸ್ಥ ಕವಿ ಮೆಲ್ವಿನ್ ರೊಡ್ರಿಗಸ್, ಆಯ್ಕೆ ಸಮಿತಿ ಮುಖ್ಯಸ್ಥ ಕವಿ ಟೈಟಸ್ ನೊರೊನ್ಹಾ, ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ರಮೇಶ್ ನಾಯಕ್ ಮೈರಾ, ಎಂಡಿಎಸ್ ಚ್ಯಾರಿಟೀಸ್ನ ಪ್ರೊ.ಲೈನಲ್ ಅರಾನ್ಹಾ, ಓಸ್ವಲ್ಡ್ ರೊಡ್ರಿಗಸ್, ಕವಿ ಕಿಶೂ ಬಾರ್ಕೂರು, ಚಿತ್ರ ನಿರ್ದೇಶಕ ಸ್ಟ್ಯಾನಿ ಬೇಳಾ, ಕೆನರಾ ಸಂಪರ್ಕ ಕೇಂದ್ರದ ಫಾ.ಅನಿಲ್ ಐವನ್ ಫೆರ್ನಾಂಡಿಸ್, ಗ್ಲ್ಯಾನಿಶ್ ಮಾರ್ಟಿಸ್ ಅವರ ಕುಟುಂಬಸ್ಥರು ಹಾಗೂ ಪಿಎಚ್ಡಿ ಮಾರ್ಗದರ್ಶಕ ಡಾ.ಸಂತೋಷ್ ಎಲ್. ಗಾಂವ್ಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

