ಉಳ್ಳಾಲ: ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಮೊಂಟೆಪದವು ಶ್ರೀ ಬ್ರಹ್ಮಮುಗೇರ ಮಹಾಂಕಾಳಿ ದೈವಸ್ಥಾನದಲ್ಲಿ ಸಾಮರಸ್ಯ ವೇದಿಕೆ ಮೊಂಟೆಪದವು ಹಾಗೂ ಭಾರತೀಯ ಅಂಚೆ ಇಲಾಖೆ, ಮಂಗಳೂರು ಇವರ ಸಹಯೋಗದಲ್ಲಿ ಮೂರನೇ ವರ್ಷದ ಅಂಚೆ ಜನಸಂಪರ್ಕ ಅಭಿಯಾನ ಹಾಗೂ ಆಕಸ್ಮಿಕ ಅಪಘಾತ ವಿಮಾ ಯೋಜನೆ ಕುರಿತ ವಿಶೇಷ ಶಿಬಿರವು ಅ.4ರಂದು ಯಶಸ್ವಿಯಾಗಿ ನಡೆಯಿತು.
ಶಿಬಿರದಲ್ಲಿ ಭಾರತೀಯ ಅಂಚೆ ಇಲಾಖೆಯ ವಿವಿಧ ಸೇವೆಗಳು ಹಾಗೂ ಆಕಸ್ಮಿಕ ಅಪಘಾತ ವಿಮಾ ಯೋಜನೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಂಚೆ ಇಲಾಖೆಯ ಸೇವೆಗಳ ಮಾಹಿತಿ ಪಡೆದುಕೊಂಡರು.

ಸಾಮರಸ್ಯ ವೇದಿಕೆಯ ವತಿಯಿಂದ ಆಯ್ಕೆ ಮಾಡಲಾದ ಕೆಲವು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಆಕಸ್ಮಿಕ ಅಪಘಾತ ವಿಮೆ ಮಾಡಿಸಿಕೊಡಲಾಯಿತು. ಒಟ್ಟು 86 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಸಾಮರಸ್ಯ ಗತಿವಿಧಿ ಮಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಸಂಯೋಜಕ ಭರತ್ ಕುಮಾರ್ ಮಂಜನಾಡಿ, ಉಳ್ಳಾಲ ತಾಲೂಕು ಸಂಯೋಜಕ ಕೇಶವ ನರಿಂಗಾನ, ಭಾರತೀಯ ಅಂಚೆ ಇಲಾಖೆಯ ಮಂಗಳೂರು ಮಾರ್ಕೆಟಿಂಗ್ ವಿಭಾಗದ ಪ್ರಮುಖ ಶಿವಪ್ರಸಾದ್ ಸಿದ್ಧಕಟ್ಟೆ, ಅಂಚೆ ಇಲಾಖೆಯ ಸಿಬ್ಬಂದಿಗಳಾದ ಹರ್ಷಿತಾ, ಅಪರ್ಣಾ ಹಾಗೂ ವಿನಯ್ ಉಪಸ್ಥಿತರಿದ್ದರು.
ಶ್ರೀ ಬ್ರಹ್ಮಮುಗೇರ ಮಹಾಂಕಾಳಿ ದೈವಸ್ಥಾನದ ಮಾಜಿ ಅಧ್ಯಕ್ಷ ಶ್ರೀಧರ್ ಪೆರಡೆ, ಜಿತೇಂದ್ರ ಪೊಟ್ಟೋಳಿಕೆ, ಸುಧೀರ್ ಮೊಂಟೆಪದವು, ಪ್ರಶಾಂತ್ ಶಾಂತನಗರ, ಜನನ್ ಶಾಂತನಗರ, ಚಂದ್ರಹಾಸ ಸಾರ್ತಬೈಲ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಾರ್ವಜನಿಕರಿಗೆ ಅಂಚೆ ಇಲಾಖೆಯ ಸೇವೆಗಳ ಕುರಿತು ನೇರ ಮಾಹಿತಿ ಒದಗಿಸುವುದರ ಜೊತೆಗೆ, ಆಕಸ್ಮಿಕ ಸಂದರ್ಭಗಳಲ್ಲಿ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ವಿಮಾ ಯೋಜನೆಯ ಮಹತ್ವವನ್ನು ತಿಳಿಸುವಲ್ಲಿ ಶಿಬಿರ ಸಹಕಾರಿಯಾಯಿತು.

