ಮಂಗಳೂರು: ಸ್ನೇಹಿತರೊಂದಿಗೆ ಪಣಂಬೂರು ಬೀಚ್ಗೆ ತೆರಳಿ ಸಮುದ್ರದಲ್ಲಿ ಆಟವಾಡುತ್ತಿದ್ದ 14 ವರ್ಷದ ಬಾಲಕನೋರ್ವ ಭಾರೀ ಅಲೆಗೆ ಸಿಲುಕಿ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ರವಿವಾರ ಸಂಜೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ರೆಂಕೆದ ಗುತ್ತು ನಿವಾಸಿ ಸೇಸಪ್ಪ ಅವರ ಪುತ್ರ ಶ್ರೇಯಸ್ (14) ನಾಪತ್ತೆಯಾದ ಬಾಲಕ ಎಂದು ಗುರುತಿಸಲಾಗಿದೆ.
ಶ್ರೇಯಸ್ ಐವರು ಸ್ನೇಹಿತರೊಂದಿಗೆ ಪಣಂಬೂರು ಕಡಲತೀರಕ್ಕೆ ಬಂದಿದ್ದ ಎನ್ನಲಾಗಿದೆ. ಬಳಿಕ ಸ್ನೇಹಿತರೆಲ್ಲರೂ ಸಮುದ್ರದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಬಂದ ಭಾರೀ ಅಲೆಯ ಹೊಡೆತಕ್ಕೆ ಶ್ರೇಯಸ್ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಶ್ರೇಯಸ್ ಅವರ ತಂದೆ ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸ್ಥಳೀಯರ ಸಹಕಾರದೊಂದಿಗೆ ನಾಪತ್ತೆಯಾಗಿರುವ ಬಾಲಕನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

