ಪುತ್ತೂರು: ಕೇರಳದತ್ತ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ಪುತ್ತೂರು ಗ್ರಾಮಾಂತರ ಪೊಲೀಸರು ತಡೆದು, 11 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾನುವಾರುಗಳನ್ನು ಮಾರಾಟ ಮಾಡಿದ್ದ ಆರೋಪದ ಮೇಲೆ ಪುತ್ತೂರು ಆರ್ಯಾಪು ನಿವಾಸಿ ಶಿವಪ್ರಸಾದ್ (52) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 5ರಂದು ಮುಂಜಾನೆ ಜಾನುವಾರುಗಳನ್ನು ಅಕ್ರಮವಾಗಿ ಕೇರಳದ ಕಡೆಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸುಷ್ಮಾ ಜಿ. ಭಂಡಾರಿ ಅವರಿಗೆ ಲಭಿಸಿತ್ತು. ಮಾಹಿತಿ ಆಧರಿಸಿ ಪೊಲೀಸರು ಸಿಬ್ಬಂದಿಯೊಂದಿಗೆ ಬಲ್ನಾಡು ಗ್ರಾಮದ ಬಿಳಿಯೂರುಕಟ್ಟೆ ಬಳಿ ವಾಹನ ತಪಾಸಣೆ ನಡೆಸಿದರು.
ಈ ವೇಳೆ KA-19-AF-8558 ನೋಂದಣಿಯ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದಾಗ, ಯಾವುದೇ ಅಗತ್ಯ ಪರವಾನಗಿ ಇಲ್ಲದೆ 11 ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಿಸುತ್ತಿರುವುದು ಪತ್ತೆಯಾಗಿದೆ. ಪೊಲೀಸರು ವಾಹನವನ್ನು ತಡೆದ ಸಂದರ್ಭ ಚಾಲಕ ಹಾಗೂ ಮತ್ತೋರ್ವ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಜಾನುವಾರುಗಳನ್ನು ಮಾಂಸಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಕೇರಳಕ್ಕೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ರಕ್ಷಿಸಲಾದ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ರ ಸಂಬಂಧಿತ ಕಲಂಗಳು ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ತನಿಖೆ ಮುಂದುವರಿದಿದೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಜಾನುವಾರುಗಳನ್ನು ಅಗತ್ಯ ಪರವಾನಗಿ ಇಲ್ಲದೆ ಮಾರಾಟ ಮಾಡಿದ ಆರೋಪದ ಮೇಲೆ ಶಿವಪ್ರಸಾದ್ ಅವರನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

