ದುಬೈ: ಅರಬ್ಬರ ನಾಡಿನಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ, ಕನ್ನಡ ಭಾಷೆ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂಭ್ರಮಿಸುವ ಉದ್ದೇಶದಿಂದ ಈ ಬಾರಿ ದುಬೈನಲ್ಲಿ ವಿಶೇಷ ಕರ್ನಾಟಕ ರಾಜ್ಯೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ. ಕರ್ನಾಟಕ ಸಂಘ ದುಬೈ ಮತ್ತು ಕನ್ನಡಿಗರ ಕೂಟ ದುಬೈ ಸಹಯೋಗದಲ್ಲಿ ನವೆಂಬರ್ 22ರಂದು ‘ದುಬೈ ಕನ್ನಡಿಗರ ಐಕ್ಯತೆಯ ಕರ್ನಾಟಕ ರಾಜ್ಯೋತ್ಸವ–2026’ ಕಾರ್ಯಕ್ರಮವನ್ನು ಅಲ್ ಖುಸೈಸ್ನ ನ್ಯೂ ಡಾನ್ ಪ್ರೈವೇಟ್ ಸ್ಕೂಲ್ನಲ್ಲಿ ಅದ್ದೂರಿಯಾಗಿ ಆಯೋಜಿಸಲಾಗುತ್ತಿದೆ.

‘ಒಗ್ಗಟ್ಟಿನ ಒಲವಿನಿಂದ ಒಮ್ಮೂಡಿದ ಒಮ್ಮತದ ಉತ್ಸವ’ ಎಂಬ ಆಶಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮವು ದುಬೈನ ವಿವಿಧ ಕನ್ನಡ ಸಂಘ-ಸಂಸ್ಥೆಗಳನ್ನು ಒಂದೇ ವೇದಿಕೆಯಡಿ ತರುವ ಮಹತ್ವದ ಪ್ರಯತ್ನವಾಗಿದೆ. ‘ಏಕತೆಯಲ್ಲಿ ಕರ್ನಾಟಕ’ ಎಂಬ ಸಂದೇಶದೊಂದಿಗೆ ಯುಎಇಯ ಕನ್ನಡಿಗರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಖ್ಯಾತ ಉದ್ಯಮಿ ಹಾಗೂ ಸಮಾಜ ಸೇವಕ ಡಾ. ರೊನಾಲ್ಡ್ ಕೊಲಾಸೊ ಅವರ ನಿರಂತರ ಸಮನ್ವಯ ಪ್ರಯತ್ನದ ಫಲವಾಗಿ ಕರ್ನಾಟಕ ಸಂಘ ದುಬೈ ಮತ್ತು ಕನ್ನಡಿಗರ ಕೂಟ ದುಬೈ ಈ ಬಾರಿ ಒಗ್ಗೂಡಿ ರಾಜ್ಯೋತ್ಸವ ಆಚರಿಸಲು ಮುಂದಾಗಿವೆ. ಎರಡೂ ಸಂಘಗಳ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ ಹಾಗೂ ಅರುಣ್ ಕುಮಾರ್ ಅವರು ಕಾರ್ಯಕ್ರಮದ ಯಶಸ್ಸಿಗೆ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದ್ದಾರೆ. KNRI ಅಧ್ಯಕ್ಷ ಹಾಗೂ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ಕೂಡ ತಮ್ಮ ಸಹಕಾರವನ್ನು ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಕಾರ್ಯಕ್ರಮದ ಮುಖ್ಯ ಆಯೋಜನೆಯ ಜವಾಬ್ದಾರಿಯನ್ನು ಕರ್ನಾಟಕ ಸಂಘ ದುಬೈ ವಹಿಸಿಕೊಂಡಿದ್ದು, ಮುಂದಿನ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ಕನ್ನಡಿಗರ ಕೂಟ ದುಬೈ, ಕರ್ನಾಟಕ ಸಂಘ ದುಬೈ ಸಹಯೋಗದಲ್ಲಿ ಆಯೋಜಿಸಲಿದೆ ಎಂದು ಸಂಘಟನೆಗಳು ಘೋಷಿಸಿವೆ. ಈ ಮೂಲಕ ಪ್ರತಿ ವರ್ಷವೂ ಎರಡೂ ಸಂಘಗಳ ನಡುವೆ ಸಂಘಟನಾತ್ಮಕ ಸಹಕಾರ ಮುಂದುವರಿಯುವ ನಿರೀಕ್ಷೆ ವ್ಯಕ್ತವಾಗಿದೆ.

ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಪ್ರಮುಖ ಭಾಷಣಕಾರರು ಹಾಗೂ ಸಾಧಕರು ಭಾಗವಹಿಸಲಿದ್ದಾರೆ. ಕರ್ನಾಟಕದ ವೈವಿಧ್ಯಮಯ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕರ್ನಾಟಕ ಹಾಗೂ ಯುಎಇಯ ಪ್ರತಿಭಾವಂತ ಕಲಾವಿದರು ತಮ್ಮ ಕಲಾ ಪ್ರದರ್ಶನಗಳ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.

ಇದೇ ಸಂದರ್ಭದಲ್ಲಿ ಕರ್ನಾಟಕ ಸಂಘ ದುಬೈ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ದುಬೈ ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸಾಧಕರಿಗೆ ‘ಸೇವಾ ರತ್ನ’ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
ಕನ್ನಡಿಗರ ಕೂಟ ದುಬೈ ವತಿಯಿಂದ ಹಲವು ವರ್ಷಗಳಿಂದ ನೀಡಲಾಗುತ್ತಿರುವ ‘ಅಂತಾರಾಷ್ಟ್ರೀಯ ಕನ್ನಡ ರತ್ನ’ ಪ್ರಶಸ್ತಿ ಹಾಗೂ ಮಧ್ಯಪ್ರಾಚ್ಯದಲ್ಲಿ ಸಾಧನೆ ಮಾಡಿರುವವರನ್ನು ಗೌರವಿಸುವ ‘ಡಾ. ಪುನೀತ್ ರಾಜ್ಕುಮಾರ್’ ಪ್ರಮುಖ ಪ್ರಶಸ್ತಿಯನ್ನೂ ಈ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದ್ದಾರೆ.

ಇದರೊಂದಿಗೆ ಕನ್ನಡ ಮಿತ್ರರು ಯುಎಇ ವತಿಯಿಂದ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಹೊರನಾಡ ಕನ್ನಡ ಪಾಠಶಾಲೆಯ 13ನೇ ವರ್ಷದ ಉಚಿತ ತರಗತಿಗಳಿಗೂ ಇದೇ ವೇದಿಕೆಯಲ್ಲಿ ಔಪಚಾರಿಕ ಚಾಲನೆ ನೀಡಲಾಗುವುದು ಎಂದು ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘ ದುಬೈ ಉಪಾಧ್ಯಕ್ಷೆ ಶದಯಾ ಕಿರೋಡಿಯನ್, ಕನ್ನಡಿಗರ ಕೂಟ ದುಬೈ ಉಪಾಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಸಹಕಾರ ವ್ಯಕ್ತಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ BCCI ಅಧ್ಯಕ್ಷ ಹಿದಾಯತ್ ಅಡ್ಡೂರು, ಕನ್ನಡಿಗರ ಕೂಟ ದುಬೈ ಮುಖ್ಯ ಸಲಹೆಗಾರ ಸಾದನ್ ದಾಸ್ ಹಾಗೂ ಕರ್ನಾಟಕ ಸಂಘ ದುಬೈ ಸಲಹೆಗಾರ ರೊನಾಲ್ಡ್ ಮಾರ್ಟಿಸ್ ಅವರು ಈ ಐತಿಹಾಸಿಕ ಒಗ್ಗಟ್ಟಿನ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದರು.

ಯುಎಇಯ ವಿವಿಧ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕನ್ನಡಿಗರ ಐಕ್ಯತೆ ಮತ್ತು ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂಭ್ರಮಕ್ಕೆ ಸಾಕ್ಷಿಯಾಗುವಂತೆ ಆಯೋಜಕರು ಮನವಿ ಮಾಡಿದ್ದಾರೆ.

