ಮಂಗಳೂರು: ಕರಾವಳಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಐತಿಹಾಸಿಕ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವ-2026ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ .ಅ.11ರಿಂದ 22ರವರೆಗೆ ನಡೆಯಲಿರುವ ದಸರಾ ಮಹೋತ್ಸವಕ್ಕೆ ಅ.12ರಂದು ಸಂಜೆ 6.30ಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅದ್ದೂರಿ ಚಾಲನೆ ನೀಡಲಿದ್ದಾರೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ ತಿಳಿಸಿದ್ದಾರೆ.

ಕುದ್ರೋಳಿ ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ನವೀಕರಣದ ರೂವಾರಿ ಹಾಗೂ ಕೇಂದ್ರದ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಈ ಬಾರಿಯ ದಸರಾ ಮಹೋತ್ಸವ ನಡೆಯಲಿದೆ ,ಅ.11ರಂದು ದಸರಾ ಮಹೋತ್ಸವದ ವೈದಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆ ನೆರವೇರಲಿದೆ. ಅ.12ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯದ ವಿವಿಧ ಇಲಾಖೆಗಳ ಸಚಿವರು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಅರಮನೆ ಶೈಲಿಯ ದರ್ಬಾರ್ ಮಂಟಪ
ಈ ಬಾರಿ ಕುದ್ರೋಳಿ ಕ್ಷೇತ್ರವನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ದರ್ಬಾರ್ ಮಂಟಪವನ್ನು ಅರಮನೆ ಶೈಲಿಯಲ್ಲಿ ನಿರ್ಮಿಸಲಾಗಿದೆ. ಶ್ರೀ ಮಹಾಗಣಪತಿ, ಶ್ರೀ ಆದಿಶಕ್ತಿ, ನವದುರ್ಗೆಯರು ಹಾಗೂ ಜ್ಞಾನದಾಯಿನಿ ಶ್ರೀ ಶಾರದಾ ಮಾತೆಯ ಮೂರ್ತಿಗಳನ್ನು ಇಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಹಾಗೂ ಆರಾಧನೆ ನೆರವೇರಿಸಲಾಗುತ್ತದೆ.
ನವರಾತ್ರಿ ಹಿನ್ನೆಲೆಯಲ್ಲಿ ಭಜನೆ, ಸಂಗೀತ, ನೃತ್ಯ, ಕ್ರೀಡಾಕೂಟಗಳು ಹಾಗೂ ವಿವಿಧ ಜಾನಪದ ಕಲಾ ಪ್ರಕಾರಗಳ ಪ್ರದರ್ಶನ ಸೇರಿದಂತೆ ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ

ಚಂಡಿಕಾಹೋಮ, ಕಲಾ ಕಾರ್ಯಕ್ರಮ
ಅ.12ರಿಂದ 20ರವರೆಗೆ ಪ್ರತಿದಿನ ಬೆಳಗ್ಗೆ 8.30ಕ್ಕೆ ಶ್ರೀಕ್ಷೇತ್ರದಲ್ಲಿ ಚಂಡಿಕಾಹೋಮ ನಡೆಯಲಿದೆ. ಅ.17ರಂದು ಸಾಮೂಹಿಕ ವಿಶೇಷ ಚಂಡಿಕಾಹೋಮ ಆಯೋಜಿಸಲಾಗಿದ್ದು, ಬೆಳಗ್ಗೆ 11.30ಕ್ಕೆ ಪೂರ್ಣಾಹುತಿ ನೆರವೇರಲಿದೆ. ಸಾರ್ವಜನಿಕರಿಗೂ ಚಂಡಿಕಾಹೋಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಸಂತೋಷಿ ಕಲಾಮಂಟಪದಲ್ಲಿ ಅ.11ರಿಂದ 20ರವರೆಗೆ ಪ್ರತಿದಿನ ಮಧ್ಯಾಹ್ನ 2.30ರಿಂದ ರಾತ್ರಿ 11.30ರವರೆಗೆ ‘ದಸರಾ ಕಲಾಝೇಂಕಾರ’ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಪ್ರತಿದಿನ ‘ಅಸಾಮಾನ್ಯ ಸ್ತ್ರೀ’ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಮಕ್ಕಳಿಗೆ, ಮಹಿಳೆಯರಿಗೆ ವಿಶೇಷ ಕಾರ್ಯಕ್ರಮ
ಅ.12ರಂದು ರಾಜ್ಯಮಟ್ಟದ ದಸರಾ ಕವಿಗೋಷ್ಠಿ, ಕಥೆ ಹಾಗೂ ಕವನ ಸ್ಪರ್ಧೆಗಳು ನಡೆಯಲಿವೆ. ಅ.13ರಂದು ಸಂಜೆ 7.30ರಿಂದ ‘ರುದ್ರತಾಂಡವಮ್’ ರಾಜ್ಯಮಟ್ಟದ ಭಕ್ತಿಪ್ರಧಾನ ಸಮೂಹ ನೃತ್ಯ ಸ್ಪರ್ಧೆ ಸೀಸನ್-2 ನಡೆಯಲಿದೆ.
ಅ.15ರಂದು ಮಕ್ಕಳಿಗಾಗಿ ‘ಮಕ್ಕಳ ದಸರಾ’ ಆಯೋಜಿಸಲಾಗಿದ್ದು, ಬೆಳಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಭಕ್ತಿಗೀತೆ, ಚಿತ್ರಕಲೆ ಹಾಗೂ ದೇಶಭಕ್ತಿಗೀತೆ ಸ್ಪರ್ಧೆಗಳು ನಡೆಯಲಿವೆ. ಅ.16ರಂದು ‘ಮುದ್ದು ಶಾರದೆ’ ಸ್ಪರ್ಧೆ, ಅ.18ರಂದು ದಸರಾ ಮ್ಯಾರಥಾನ್ ಎಡಿಷನ್-4 ಹಾಗೂ ‘ಕಿನ್ನಿಪಿಲಿ’ ಸೀಸನ್-2 ಆಯೋಜಿಸಲಾಗಿದೆ.
ಅ.19ರಂದು ಮಹಿಳೆಯರಿಗಾಗಿ ‘ಮಹಿಳಾ ದಸರಾ’ ನಡೆಯಲಿದ್ದು, ಭರತನಾಟ್ಯ, ಬೆಂಕಿ ರಹಿತ ಅಡುಗೆ, ರಂಗೋಲಿ, ಮೆಹಂದಿ, ಸಮೂಹ ಗಾಯನ ಹಾಗೂ ಹೂ ಕಟ್ಟುವ ಸ್ಪರ್ಧೆಗಳು ನಡೆಯಲಿವೆ. ರಾತ್ರಿ 8 ಗಂಟೆಗೆ ಮಹಿಳೆಯರಿಂದ ಸಮೂಹ ಗರ್ಭಾ-ದಾಂಡಿಯಾ ನೃತ್ಯವೂ ನಡೆಯಲಿದೆ. ಅ.20ರಂದು ‘ದಸರಾ ರಂಗಾಂತರಂಗ’ ಹೆಸರಿನಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ.
ಅ.20ರಂದು ಬೆಳಗ್ಗೆ 9 ಗಂಟೆಗೆ ಶಾರದಾ ಮಾತೆಯ ಮಡಿಲಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಶೋಭಾಯಾತ್ರೆಯಲ್ಲಿ ಡಿಜೆ ಸೌಂಡ್ಸ್ಗೆ ಅವಕಾಶವಿಲ್ಲ
ಮಂಗಳೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಐತಿಹಾಸಿಕ ದಸರಾ ಶೋಭಾಯಾತ್ರೆ ಅ.21ರಂದು ಸಂಜೆ 4 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಆರಂಭವಾಗಲಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಲಿರುವ ಶೋಭಾಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು, ಸ್ತಬ್ಧಚಿತ್ರಗಳು ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ಮೆರವಣಿಗೆ ಪ್ರಮುಖ ಆಕರ್ಷಣೆಯಾಗಲಿದೆ.
ಶೋಭಾಯಾತ್ರೆಯಲ್ಲಿ ಡಿಜೆ ಸೌಂಡ್ಸ್ ಬಳಕೆಗೆ ಅವಕಾಶ ಇರುವುದಿಲ್ಲ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಸಾಂಪ್ರದಾಯಿಕ ಕಲಾ ತಂಡಗಳು, ವಾದ್ಯಮೇಳಗಳು ಹಾಗೂ ಸಾಂಸ್ಕೃತಿಕ ಪ್ರದರ್ಶನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ದಸರಾ ಶೋಭಾಯಾತ್ರೆಯನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಅನುಗುಣವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕುದ್ರೋಳಿ ಕ್ಷೇತ್ರದಿಂದ ಆರಂಭವಾಗುವ ಶೋಭಾಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂದೇಶವನ್ನು ಸಾರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಶೋಭಾಯಾತ್ರೆಯ ಸೊಬಗನ್ನು ಕಣ್ತುಂಬಿಕೊಳ್ಳುವ ನಿರೀಕ್ಷೆಯಿದೆ.
ಪತ್ರಿಕಾಗೋಷ್ಠಿಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಜಯರಾಜ್ ಸೋಮಸುಂದರ್, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಲೀಲಾಕ್ಷ ಕರ್ಕೇರ, ಚಿತ್ತರಂಜನ್ ಗರೋಡಿ,ಡಾ.ಬಿ.ಜಿ ಸುವರ್ಣ, ಜತಿನ್ ಅತ್ತಾವರ, ರಾಧಾಕೃಷ್ಣ, ಚಂದನ್ ದಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

