ಬೆಂಗಳೂರು: ರಾಜ್ಯದಲ್ಲಿ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಸಾರಿಗೆ ಇಲಾಖೆ, ಹಾಫ್ ಹೆಲ್ಮೆಟ್ ಬಳಕೆಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇನ್ನು ಮುಂದೆ ಸುರಕ್ಷತಾ ಮಾನದಂಡಗಳನ್ನು ಪೂರೈಸುವ ಗುಣಮಟ್ಟದ ಹೆಲ್ಮೆಟ್ಗಳನ್ನು ಮಾತ್ರ ಬಳಸುವಂತೆ ಇಲಾಖೆ ಸೂಚಿಸಿದೆ.
ರಸ್ತೆ ಅಪಘಾತಗಳ ಸಂದರ್ಭದಲ್ಲಿ ಹಾಫ್ ಹೆಲ್ಮೆಟ್ಗಳು ಸವಾರರ ತಲೆ ಹಾಗೂ ಮುಖದ ಪ್ರಮುಖ ಭಾಗಗಳಿಗೆ ಸಮರ್ಪಕ ರಕ್ಷಣೆ ನೀಡುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೇವಲ ತಲೆಗೆ ಹೆಲ್ಮೆಟ್ ಧರಿಸಿರುವುದು ಮಾತ್ರವಲ್ಲದೆ, ಅದು ನಿಗದಿತ ಸುರಕ್ಷತಾ ಮಾನದಂಡಗಳನ್ನು ಪೂರೈಸಿರುವುದೂ ಕಡ್ಡಾಯವಾಗಲಿದೆ.
ದ್ವಿಚಕ್ರ ವಾಹನ ಸವಾರರು BIS/ISI ಮಾನದಂಡಗಳಿಗೆ ಅನುಗುಣವಾಗಿರುವ ಹೆಲ್ಮೆಟ್ಗಳನ್ನು ಮಾತ್ರ ಬಳಸಬೇಕು ಎಂದು ಸಾರಿಗೆ ಇಲಾಖೆ ಸೂಚಿಸಿದೆ. ಹೆಲ್ಮೆಟ್ ಖರೀದಿಸುವ ಸಂದರ್ಭದಲ್ಲಿ ಅದರ ಗುಣಮಟ್ಟ, ಪ್ರಮಾಣೀಕರಣ ಹಾಗೂ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸುವಂತೆ ಸವಾರರಿಗೆ ಸಲಹೆ ನೀಡಲಾಗಿದೆ.
ನಿಯಮ ಉಲ್ಲಂಘಿಸಿದರೆ ದಂಡ
ಹಾಫ್ ಹೆಲ್ಮೆಟ್ ಅಥವಾ ನಿಗದಿತ ಸುರಕ್ಷತಾ ಮಾನದಂಡಗಳನ್ನು ಪೂರೈಸದ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುವವರ ವಿರುದ್ಧ ನಿಯಮಾನುಸಾರ ದಂಡ ವಿಧಿಸಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಈಗಾಗಲೇ ಹಾಫ್ ಹೆಲ್ಮೆಟ್ ಬಳಸುತ್ತಿರುವ ಸವಾರರು ಸುರಕ್ಷತಾ ಮಾನದಂಡಗಳಿಗೆ ಅನುಗುಣವಾದ ಹೆಲ್ಮೆಟ್ಗೆ ಬದಲಾಯಿಸಿಕೊಳ್ಳಬೇಕಾಗಿದೆ.
ತಯಾರಕರು, ಮಾರಾಟಗಾರರಿಗೂ ಎಚ್ಚರಿಕೆ
ಸುರಕ್ಷತಾ ಮಾನದಂಡಗಳನ್ನು ಪೂರೈಸದ ಹೆಲ್ಮೆಟ್ಗಳ ತಯಾರಿಕೆ ಮತ್ತು ಮಾರಾಟದ ಮೇಲೂ ಇಲಾಖೆ ನಿಗಾ ವಹಿಸಲಿದೆ. ನಿಯಮ ಉಲ್ಲಂಘಿಸಿ ಗುಣಮಟ್ಟವಿಲ್ಲದ ಹೆಲ್ಮೆಟ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ತಯಾರಕರು ಹಾಗೂ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.
ಅಪಘಾತ ಸಂದರ್ಭದಲ್ಲಿ ತಲೆಗೆ ಉಂಟಾಗುವ ಗಂಭೀರ ಗಾಯಗಳನ್ನು ತಡೆಯುವಲ್ಲಿ ಗುಣಮಟ್ಟದ ಹೆಲ್ಮೆಟ್ಗಳು ಪ್ರಮುಖ ಪಾತ್ರ ವಹಿಸುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಒತ್ತು ನೀಡಲಾಗಿದೆ. ದ್ವಿಚಕ್ರ ವಾಹನ ಸವಾರರು ನಿಯಮ ಪಾಲಿಸುವುದರ ಜೊತೆಗೆ ತಮ್ಮ ಸುರಕ್ಷತೆಗೂ ಆದ್ಯತೆ ನೀಡಬೇಕು ಎಂದು ಸಾರಿಗೆ ಇಲಾಖೆ ಮನವಿ ಮಾಡಿದೆ.

