ಮಂಗಳೂರು, ಅ.7: ತುಳು ಭಾಷೆಯನ್ನು ಬಿಗಿಯಾಗಿ ಕಟ್ಟಿಕೊಟ್ಟಿರುವ ‘ಗುತ್ತೊಂಜಿ ಕಥೆ’ ತುಳು ನಾಟಕ ಕೃತಿಯು ತುಳುನಾಡಿನ ನೆಲದ ಪರಂಪರೆ ಹಾಗೂ ಸಂಸ್ಕೃತಿಯನ್ನು ಸಂರಕ್ಷಿಸುವ ಸಂದೇಶವನ್ನು ಸಾರುತ್ತದೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ. ಚಿನ್ನಪ್ಪ ಗೌಡ ಹೇಳಿದರು.
ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಬುಧವಾರ ಪತ್ರಕರ್ತ ರಾಜೇಶ್ ಶೆಟ್ಟಿ ತೋಟ ಅವರ ‘ಗುತ್ತೊಂಜಿ ಕಥೆ’ ತುಳು ನಾಟಕ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ತುಳುನಾಡಿನ ಗುತ್ತು ಪ್ರಧಾನ ಪರಂಪರೆಯನ್ನು ಆಧುನಿಕ ಸಂದರ್ಭದಲ್ಲಿ ನಿರ್ಲಕ್ಷಿಸಿ, ಹೊಸ ತಲೆಮಾರು ಆಧುನಿಕತೆಯತ್ತ ಸಾಗಲು ಬಯಸುತ್ತಿರುವ ಬೆಳವಣಿಗೆಯನ್ನು ನಾಟಕದ ಪಾತ್ರಗಳು ಅನಾವರಣಗೊಳಿಸಿವೆ. ಗುತ್ತಿನ ವಿವಿಧ ಆಯಾಮಗಳ ಕುರಿತು ಹಲವು ನಾಟಕಗಳು ರಚನೆಯಾಗಿದ್ದರೂ, ‘ಗುತ್ತೊಂಜಿ ಕಥೆ’ಯಲ್ಲಿ ಸಂಪೂರ್ಣ ಭಿನ್ನವಾದ ಎರಡು ನೆಲೆಗಳ ನಡುವಿನ ಸಂಘರ್ಷವನ್ನು ಪರಿಣಾಮಕಾರಿಯಾಗಿ ತೆರೆದಿಡುವ ಪ್ರಯತ್ನ ಮಾಡಲಾಗಿದೆ ಎಂದರು.
ತುಳು ಪರಂಪರೆ ಒಂದಲ್ಲ ಒಂದು ರೀತಿಯಲ್ಲಿ ನಾಶವಾಗುತ್ತಲೇ ಉಳಿಯುವ ಸಾಧ್ಯತೆಯಿದ್ದು, ಅದನ್ನು ಸಂರಕ್ಷಿಸುವ ಅಗತ್ಯವನ್ನು ನಾಟಕ ಒತ್ತಿ ಹೇಳುತ್ತದೆ. ಈ ಕೃತಿಯ ರಂಗಪ್ರವೇಶ ಯಶಸ್ವಿಯಾಗುವ ವಿಶ್ವಾಸವಿದೆ ಎಂದು ಡಾ. ಚಿನ್ನಪ್ಪ ಗೌಡ ವಿಶ್ಲೇಷಿಸಿದರು.
ಕೃತಿ ಪರಿಚಯ ನೀಡಿದ ನ್ಯಾಯವಾದಿ ಹಾಗೂ ರಂಗಕರ್ಮಿ ಶಶಿರಾಜ್ ಕಾವೂರು ಮಾತನಾಡಿ, ನಾಟಕದಲ್ಲಿ ಉತ್ತಮ ಬಿಗಿತವಿದ್ದು, ತುಳುನಾಡಿನ ಮಣ್ಣಿನ ಸೊಗಡನ್ನು ಒಳಗೊಂಡಿದೆ. ಕಥೆಯನ್ನು ಕಟ್ಟಿಕೊಟ್ಟಿರುವ ಶೈಲಿ ರಂಗಪ್ರಯೋಗಕ್ಕೆ ಪೂರಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಹಾಗೂ ಕೃತಿಕರ್ತ ರಾಜೇಶ್ ಶೆಟ್ಟಿ ತೋಟ ಉಪಸ್ಥಿತರಿದ್ದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

