ಪಣಜಿ: ಬಾಲಿವುಡ್ ಹಾಗೂ ಮರಾಠಿ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ನಾನಾ ಪಾಟೇಕರ್ (75) ಅವರು ಗುರುವಾರ ನಿಧನರಾಗಿದ್ದಾರೆ. ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ಬೆಳಗ್ಗೆ ಹೃದಯ ಸ್ತಂಭನಕ್ಕೆ ಒಳಗಾದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರ ಸತತ ಪ್ರಯತ್ನದ ನಡುವೆಯೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ನಾನಾ ಪಾಟೇಕರ್ ಅವರ ಮೂಲ ಹೆಸರು ವಿಶ್ವನಾಥ್ ಪಾಟೇಕರ್. ಗುರುವಾರ ಬೆಳಗ್ಗೆ ಸುಮಾರು 5.20ರ ವೇಳೆಗೆ ಅವರಿಗೆ ತೀವ್ರ ಹೃದಯ ಸ್ತಂಭನ ಸಂಭವಿಸಿದ್ದು, ಬಳಿಕ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯಕೀಯ ತಂಡ ಸುಮಾರು 45 ನಿಮಿಷಗಳ ಕಾಲ ನಿರಂತರವಾಗಿ ಸಿಪಿಆರ್ ನಡೆಸಿ ಅವರನ್ನು ಉಳಿಸಲು ಪ್ರಯತ್ನಿಸಿತಾದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಹಲವು ದಶಕಗಳ ಕಾಲ ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ನಾನಾ ಪಾಟೇಕರ್, ತಮ್ಮ ವಿಶಿಷ್ಟ ಸಂಭಾಷಣೆ ಶೈಲಿ, ಗಂಭೀರ ಧ್ವನಿ ಹಾಗೂ ತೀವ್ರ ಅಭಿನಯದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಪ್ರತ್ಯೇಕ ಸ್ಥಾನ ಸಂಪಾದಿಸಿದ್ದರು.
1978ರಲ್ಲಿ ‘ಗಮನ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು, ಬಳಿಕ ‘ಪರಿಂದಾ’, ‘ಕ್ರಾಂತಿವೀರ್’, ‘ಅಗ್ನಿಸಾಕ್ಷಿ’, ‘ತಿರಂಗಾ’, ‘ವೆಲ್ಕಮ್’, ‘ನಟಸಾಮ್ರಾಟ್’, ‘ಅಬ್ ತಕ್ ಛಪ್ಪನ್’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದರು. ಗಂಭೀರ ಹಾಗೂ ಸವಾಲಿನ ಪಾತ್ರಗಳಿಗೆ ಜೀವ ತುಂಬುವ ಅವರ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಮೂರು ರಾಷ್ಟ್ರೀಯ ಪ್ರಶಸ್ತಿ, ಪದ್ಮಶ್ರೀ ಗೌರವ
ನಾನಾ ಪಾಟೇಕರ್ ಅವರ ಅತ್ಯುತ್ತಮ ಅಭಿನಯಕ್ಕೆ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿದ್ದವು. ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರವು 2013ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ಕನ್ನಡ ಚಿತ್ರದಲ್ಲೂ ಅಭಿನಯ
ನಾನಾ ಪಾಟೇಕರ್ ಅವರು ಕನ್ನಡ ಚಿತ್ರರಂಗದಲ್ಲೂ ಅಭಿನಯಿಸಿದ್ದರು. ‘ಯಕ್ಷ’ ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ತಮ್ಮ ವಿಭಿನ್ನ ಅಭಿನಯದ ಮೂಲಕ ಕನ್ನಡ ಪ್ರೇಕ್ಷಕರ ಗಮನ ಸೆಳೆದಿದ್ದರು.
ಸಮಾಜಮುಖಿ ಕಾರ್ಯಗಳಲ್ಲೂ ಗುರುತಿಸಿಕೊಂಡಿದ್ದ ನಟ
ಚಿತ್ರರಂಗದ ಹೊರತಾಗಿಯೂ ನಾನಾ ಪಾಟೇಕರ್ ಅವರು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಬರಪೀಡಿತ ರೈತರಿಗೆ ನೆರವಾಗುವ ಉದ್ದೇಶದಿಂದ ‘ನಾಮ್ ಫೌಂಡೇಶನ್’ ಮೂಲಕ ವಿವಿಧ ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಸಿದ್ದರು.
ನಾನಾ ಪಾಟೇಕರ್ ಅವರ ಹಠಾತ್ ನಿಧನದ ಸುದ್ದಿ ಹೊರಬಿದ್ದ ಬೆನ್ನಲ್ಲೇ ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಚಿತ್ರರಂಗದ ಸಹನಟರು, ಗಣ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

