ಲಾಸ್ ವೇಗಸ್: ಅಸೋಸಿಯೇಷನ್ ಆಫ್ ರಾಮಕ್ಷತ್ರಿಯಾಸ್ ಇನ್ ನಾರ್ತ್ ಅಮೆರಿಕಾ (ಅರ್ಕಿನ) ಸಂಸ್ಥೆಯ 15ನೇ ವಾರ್ಷಿಕೋತ್ಸವ ಹಾಗೂ ಆರನೇ ತ್ರೈವಾರ್ಷಿಕ ಸಮ್ಮೇಳನ ಸೆ.26ರಂದು ಅಮೆರಿಕದ ನೆವಾಡಾ ರಾಜ್ಯದ ಲಾಸ್ ವೇಗಸ್ನ ರಿಯೋ ಹೋಟೆಲ್ ಅಂಡ್ ರೆಸಾರ್ಟ್ನಲ್ಲಿ ವಿಜೃಂಭಣೆಯಿಂದ ನಡೆಯಿತು.
ಮೂರು ಹಂತಗಳಲ್ಲಿ ನಡೆದ ಕಾರ್ಯಕ್ರಮದ ಮೊದಲ ಹಂತವು ಮಾಸ್ಟರ್ ಮಯಾಂಕ್ ರಾವ್ ಅವರ ದೇವರನಾಮ ಗಾಯನ ಹಾಗೂ ಕುಮಾರಿ ಆವ್ಯಾ ಕುಂದಾಪುರ ಅವರ ಗಣೇಶ ಸ್ತುತಿ ನೃತ್ಯದೊಂದಿಗೆ ಆರಂಭವಾಯಿತು. ಅಧ್ಯಕ್ಷ ಡಾ. ಮೋಹನಚಂದ್ರ ಕೆ.ಪಿ. ಅವರು ಸ್ವಾಗತಿಸಿದರು. ಹೋಟೆಲ್ ಉದ್ಯಮಿ ಮಂಜುನಾಥ್ ಶೇರಿಗಾರ್ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಮಾಲಿನಿ ನೀರಂಬಳ್ಳಿ ಪ್ರಭು, ಪ್ರಭಾಕರ ಕಂಡೂರ್ ಶೇರೆಗಾರ್ ಹಾಗೂ ಡಾ.ಕಿಶನ್ ಕುಂಬಳ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಜೇಶ್ ರಾವ್ ಸಂಸ್ಥೆಯ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು. ಪ್ರಭಾಕರ ಕಂಡೂರ್ ಶೇರೆಗಾರ್ ‘ಸ್ಪಂದನ–26’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.

ಮನರಂಜನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರ ಮಕ್ಕಳು ಗಿಟಾರ್ ವಾದನ, ಭರತನಾಟ್ಯ, ಚೀರ್ಲೀಡಿಂಗ್, ಕರಾಟೆ ಹಾಗೂ ಜಿಮ್ನಾಸ್ಟಿಕ್ಸ್ ಪ್ರದರ್ಶಿಸಿ ಗಮನ ಸೆಳೆದರು. ಬಳಿಕ ‘ಪರಿವರ್ತನೆ’ ಕಿರು ನಾಟಕ, ತಾಯಿ–ಮಗಳ ಜುಗಲ್ಬಂದಿ ನೃತ್ಯ, ಸಂಗೀತ ಕಾರ್ಯಕ್ರಮ ಹಾಗೂ ಮಹಿಳಾ ಸದಸ್ಯರ ಸಮೂಹ ನೃತ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ವಾಷಿಂಗ್ಟನ್, ಕ್ಯಾಲಿಫೋರ್ನಿಯಾ, ಫ್ಲೋರಿಡಾ, ಟೆಕ್ಸಾಸ್, ಜಾರ್ಜಿಯಾ, ಮೇರಿಲ್ಯಾಂಡ್, ಇಲಿನಾಯ್ಸ್, ಮ್ಯಾಸಚೂಸೆಟ್ಸ್, ಓಹಿಯೋ ಸೇರಿದಂತೆ ವಿವಿಧ ರಾಜ್ಯಗಳಿಂದ ಅರ್ಕಿನ ಸದಸ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ರಾಜೇಂದ್ರ ಕುಂದಾಪುರ, ಸುಧೀರ್ ಕಾಸರಗೋಡು, ಡಾ. ಪ್ರಶಾಂತ್ ಕುಮಾರ್, ಮೋಹನ್ ನಾಯಕ್ ಸೇರಿದಂತೆ ಎಲ್ಲರಿಗೂ ಸಂಸ್ಥೆ ಕೃತಜ್ಞತೆ ಸಲ್ಲಿಸಿದೆ. ವೇಣುಗೋಪಾಲ್ ಶೇರೆಗಾರ್ ಹಾಗೂ ಶ್ರುತಿ ಶೇರೆಗಾರ್ ಕುಟುಂಬದವರು ಅತಿಥಿಗಳಿಗೆ ಔತಣಕೂಟ ಏರ್ಪಡಿಸಿ ಆತಿಥ್ಯ ನೀಡಿದರು.

