ಮಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಸೈಬರ್ ವಂಚಕರು 75 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಬರೋಬ್ಬರಿ ₹2 ಕೋಟಿ ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಕುರಿತು ಮಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ದೂರುದಾರರಿಗೆ ಇತ್ತೀಚೆಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ತಾನು ಮುಂಬೈನ ಕೊಲಾಬಾ ಪೊಲೀಸ್ ಠಾಣೆಯ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಮನಿ ಲಾಂಡರಿಂಗ್, ಡ್ರಗ್ಸ್ ವ್ಯವಹಾರ ಹಾಗೂ ಮಕ್ಕಳ ಕಳ್ಳಸಾಗಣೆ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿದೆ ಎಂದು ಹೇಳಿ ಆತಂಕ ಸೃಷ್ಟಿಸಿದ್ದಾನೆ.
ಅಷ್ಟೇ ಅಲ್ಲದೆ, ಅಂತಾರಾಷ್ಟ್ರೀಯ ಮನಿ ಲಾಂಡರಿಂಗ್ ಪ್ರಕರಣದ ಆರೋಪಿ ನರೇಶ್ ಗೋಯಲ್ ಅವರೊಂದಿಗೆ ದೂರುದಾರರು ಸಂಪರ್ಕ ಹೊಂದಿದ್ದಾರೆ ಹಾಗೂ ಅವರ ವಿರುದ್ಧ ಮುಂಬೈನ ಕೊಲಾಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಆರೋಪಿಗಳು ತಿಳಿಸಿದ್ದಾರೆ.
ನಂತರ ವಾಟ್ಸ್ಆ್ಯಪ್ ಮೂಲಕ ವಿಡಿಯೋ ಕಾಲ್ ಮಾಡಿದ ಮತ್ತೊಬ್ಬ ವ್ಯಕ್ತಿ ತಾನು ಸಿಬಿಐ ಅಧಿಕಾರಿ ಸಮಾಧಾನ್ ಪವಾರ್ ಎಂದು ಪರಿಚಯಿಸಿಕೊಂಡಿದ್ದಾನೆ. ಜತೆಗೆ, ‘ಜಡ್ಜ್ ಚಂದ್ರಚೂಡ್’ ಎಂಬವರು ಪ್ರಕರಣದಲ್ಲಿ ಸಹಾಯ ಮಾಡಲಿದ್ದಾರೆ ಎಂದು ಹೇಳಿ ದೂರುದಾರರನ್ನು ಮತ್ತಷ್ಟು ಭಯಭೀತರನ್ನಾಗಿಸಿದ್ದಾನೆ.
ಅಂತಾರಾಷ್ಟ್ರೀಯ ಮಟ್ಟದ ಅಪರಾಧದಲ್ಲಿ ಭಾಗಿಯಾಗಿರುವುದಾಗಿ ಆರೋಪಿಸಿ, ಸುಪ್ರೀಂ ಕೋರ್ಟ್ನ ‘ನ್ಯಾಷನಲ್ ಸೀಕ್ರೆಟ್ ಆ್ಯಕ್ಟ್’ ಪಾಲಿಸಬೇಕು ಎಂದು ಹೇಳಿ ಯಾರಿಗೂ ವಿಷಯ ತಿಳಿಸದಂತೆ ಸೂಚಿಸಿದ್ದಾರೆ. ಇದರಿಂದ ಆತಂಕಗೊಂಡ ದೂರುದಾರರು ಈ ವಿಚಾರವನ್ನು ಕುಟುಂಬಸ್ಥರು ಹಾಗೂ ಸ್ನೇಹಿತರಿಗೂ ತಿಳಿಸಿರಲಿಲ್ಲ.
ನಂತರ ಆರೋಪಿಗಳು ದೂರುದಾರರ ಬ್ಯಾಂಕ್ ಖಾತೆಗಳು ಹಾಗೂ ಆಸ್ತಿ ವಿವರಗಳನ್ನು ಪಡೆದುಕೊಂಡು, ಅವುಗಳನ್ನು ಪರಿಶೀಲಿಸಿ ಎರಡು ದಿನಗಳಲ್ಲಿ ‘ಕ್ಲಿಯರೆನ್ಸ್’ ನೀಡುವುದಾಗಿ ತಿಳಿಸಿದ್ದಾರೆ. ಅವರ ಸೂಚನೆಯಂತೆ ದೂರುದಾರರು ಮೊದಲು ₹60 ಲಕ್ಷವನ್ನು ಆರೋಪಿಗಳು ನೀಡಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಬಳಿಕ ಹಂತ ಹಂತವಾಗಿ ಮತ್ತಷ್ಟು ಹಣ ವರ್ಗಾಯಿಸುವಂತೆ ಒತ್ತಾಯಿಸಿದ್ದು, ಒಟ್ಟು ₹1.40 ಕೋಟಿ ಹೆಚ್ಚುವರಿಯಾಗಿ ವರ್ಗಾಯಿಸಿದ್ದಾರೆ.
ಸೆಪ್ಟೆಂಬರ್ 25ರಿಂದ ಅಕ್ಟೋಬರ್ 5ರ ಅವಧಿಯಲ್ಲಿ ಒಟ್ಟು ₹2 ಕೋಟಿ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಕೊನೆಗೆ ದೂರುದಾರರು ತಮ್ಮ ಗೆಳೆಯರೊಬ್ಬರಿಗೆ ಈ ವಿಚಾರ ತಿಳಿಸಿದಾಗ, ತಾವು ಸೈಬರ್ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಬಳಿಕ ಮಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

