ಅಜ್ಮಾನ್: ಯು.ಎ.ಇ.ಯ ಅಜ್ಮಾನ್ನಲ್ಲಿ ಭಾರತೀಯ ಶಾಸ್ತ್ರೀಯ ಹಾಗೂ ವಿವಿಧ ನೃತ್ಯ ಪ್ರಕಾರಗಳ ವೈಭವವನ್ನು ಅನಾವರಣಗೊಳಿಸಿದ ‘ನೃತ್ಯ ಶಕ್ತಿ ವೈಭವ-2026’ ಕಾರ್ಯಕ್ರಮ ಕಲಾ ರಸಿಕರ ಮನಸೂರೆಗೊಂಡಿತು.


‘ನೃತ ಶಕ್ತಿ – ಸೋಲ್ ಆಫ್ ಡ್ಯಾನ್ಸ್’ (soul of dance) ಅಕಾಡೆಮಿ ವತಿಯಿಂದ ವಿದುಷಿ ರೂಪಾ ಕಿರಣ್ ಅವರ ಸಂಯೋಜನೆಯಲ್ಲಿ ಅಕ್ಟೋಬರ್ 4ರಂದು ಅಜ್ಮಾನ್ನ ನಾರ್ತ್ ಬ್ರಿಟಿಷ್ ಸ್ಕೂಲ್ನಲ್ಲಿ ನೃತ್ಯ ಕಾರ್ಯಕ್ರಮ ನಡೆಯಿತು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ.ಬಿ.ಆರ್. ಶೆಟ್ಟಿ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸರ್ವೋತ್ತಮ ಶೆಟ್ಟಿ, ಪ್ರವೀಣ್ ವಕ್ವಾಡಿ, ವಿದುಷಿ ಮೇರಿ ಬಿನಿ, ವಿಶ್ವನಾಥ ಶೆಟ್ಟಿ, ದೀಪಕ್ ಪೂಜಾರಿ ಹಾಗೂ ರಾಜೇಶ್ ಕುತ್ತಾರ್ ಉಪಸ್ಥಿತರಿದ್ದರು. ಶ್ರೀ ಕಿರಣ್ ಕೊಟ್ಟಾರಿ ಗಣ್ಯರನ್ನು ಶಾಲು ಹೊದಿಸಿ ಗೌರವಪೂರ್ವಕವಾಗಿ ಸ್ವಾಗತಿಸಿದರು.


ಕಾರ್ಯಕ್ರಮದಲ್ಲಿ ಅಖಿಲ ಭಾರತ ಭರತನಾಟ್ಯ ಸಂಸ್ಥೆಯ ಸ್ಥಾಪಕಿ ವಿದುಷಿ ರೂಪಾ ಕಿರಣ್ ಅವರ ಗುರು ವಿದುಷಿ ಮೇರಿ ಬೆನ್ನಿ ಅವರನ್ನು ಗುರುವಂದನೆ ಸಲ್ಲಿಸಿ ಸನ್ಮಾನಿಸಲಾಯಿತು.


ವಿಘ್ನ ವಿನಾಯಕನ ನೃತ್ಯ ಪ್ರಸ್ತುತಿಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಪುಟಾಣಿಗಳಿಂದ ಹಿಡಿದು ಹಿರಿಯ ಕಲಾವಿದರವರೆಗೆ ವಿವಿಧ ನೃತ್ಯ ಪ್ರದರ್ಶನಗಳು ಗಮನ ಸೆಳೆದವು. ಪುಟಾಣಿಗಳು ಕಾಲಿಗೆ ಗೆಜ್ಜೆ ಕಟ್ಟಿ ಪ್ರದರ್ಶಿಸಿದ ನೃತ್ಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಮಕ್ಕಳ ನೃತ್ಯ ಪ್ರದರ್ಶನಗಳಿಗೆ ಪೋಷಕರೂ ಉತ್ಸಾಹದಿಂದ ಸಾಥ್ ನೀಡಿದರು.


ದಕ್ಷಿಣ ಮತ್ತು ಉತ್ತರ ಭಾರತದ ವಿವಿಧ ನೃತ್ಯ ಶೈಲಿಗಳು, ಜಾನಪದ ನೃತ್ಯ ಸೇರಿದಂತೆ ಹಲವು ಪ್ರಕಾರಗಳ ಮನಮೋಹಕ ಪ್ರದರ್ಶನಗಳು ಪ್ರೇಕ್ಷಕರಿಗೆ ಕಲಾ ರಸದೌತಣ ನೀಡಿದವು.


ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ದಿವಂಗತ ಕುಮಾರಿ ಸಾತ್ವಿ ನಿತ್ಯಾನಂದ ಶೆಟ್ಟಿ ಅವರ ಸ್ಮರಣಾರ್ಥವಾಗಿ ವಿಶೇಷವಾಗಿ ರೂಪಿಸಲಾಗಿದ್ದ ‘ಕೃಷ್ಣ ಪ್ರಿಯ’ ರೂಪಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಮಹಾಭಾರತದಲ್ಲಿ ಶ್ರೀಕೃಷ್ಣನ ಪಾತ್ರ, ನಾರಿಯರೊಂದಿಗಿನ ಅವರ ಒಡನಾಟ, ದುಷ್ಟರಿಗೆ ಶಿಕ್ಷೆ ಹಾಗೂ ಸಜ್ಜನರಿಗೆ ರಕ್ಷಣೆ ನೀಡುವ ಸಂದೇಶದೊಂದಿಗೆ ಭಗವದ್ಗೀತೆಯ ಸಾರವನ್ನು ರೂಪಕದ ಮೂಲಕ ಮನೋಜ್ಞವಾಗಿ ಅಭಿನಯಿಸಲಾಯಿತು.


ಈ ರೂಪಕದಲ್ಲಿ ವಿದುಷಿ ರೂಪಾ ಕಿರಣ್ ಅವರು ಶ್ರೀಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ ಗಮನ ಸೆಳೆಯಿತು. ರೂಪಕದ ಅಂತ್ಯದಲ್ಲಿ ಪ್ರೇಕ್ಷಕರ ಕರತಾಡನ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಯಿತು.


ಸುಮಾರು 60ರಿಂದ 70ಕ್ಕೂ ಅಧಿಕ ಕಲಾವಿದರು ವಿವಿಧ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದರು. ಕಿಕ್ಕಿರಿದ ಸಭಾಂಗಣದಲ್ಲಿ ನೆರೆದಿದ್ದ ಕಲಾ ಪ್ರೇಮಿಗಳು ಕಾರ್ಯಕ್ರಮವನ್ನು ಕೊನೆಯವರೆಗೂ ವೀಕ್ಷಿಸಿ ಕಲಾವಿದರ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿದ ಗಣ್ಯರು ಹಾಗೂ ಆಗಮಿಸಿದ್ದ ಅತಿಥಿ-ಅಭ್ಯಾಗತರನ್ನು ವೇದಿಕೆಗೆ ಆಹ್ವಾನಿಸಿ ಗೌರವಿಸಲಾಯಿತು. ನಿಖಿತಾ ಹಾಗೂ ದೃಷ್ಟಿ ಶಾನುಭೋಗ್ ಕಾರ್ಯಕ್ರಮ ನಿರೂಪಿಸಿದರು. ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.




