ಮಂಗಳೂರು: ಎಸ್ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಿರುವ ವಿಚಾರವಾಗಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಪ್ರಕೋಷ್ಠದ ತಂಡ ಕಾವೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತು.
ಎಸ್ಐಆರ್ ಚುನಾವಣಾ ಪ್ರಕ್ರಿಯೆಯ ಭಾಗವಾಗಿದ್ದು, ನಮೂನೆ-7ರ ಮೂಲಕ ಸಲ್ಲಿಕೆಯಾಗುವ ಅರ್ಜಿಗಳನ್ನು ಚುನಾವಣಾ ಅಧಿಕಾರಿಗಳು ನಿಯಮಾನುಸಾರ ಪರಿಶೀಲಿಸಿ ವಿಲೇವಾರಿ ಮಾಡುವ ಅಧಿಕಾರ ಹೊಂದಿದ್ದಾರೆ. ಇಂತಹ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿರುವ ಕ್ರಮದ ಕುರಿತು ಕಾನೂನು ಪ್ರಕೋಷ್ಠದ ಮುಖಂಡರು ಅಧಿಕಾರಿಗಳ ಗಮನ ಸೆಳೆದರು.

ರಾಜ್ಯ ಸರ್ಕಾರವು ತನ್ನ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು. ಕಾರ್ಯಕರ್ತರಿಗೆ ಅನಗತ್ಯ ತೊಂದರೆ ಉಂಟಾಗದಂತೆ ಪಕ್ಷವು ಕಾನೂನುಬದ್ಧ ಹೋರಾಟ ನಡೆಸಲಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಬಿಜೆಪಿ ಕಾರ್ಯಕರ್ತರು ಅಥವಾ ಎಸ್ಐಆರ್ ಕಾರ್ಯದಲ್ಲಿ ಬಿಎಲ್ಒ-2 ಆಗಿ ಸಹಕರಿಸಿದವರು ಯಾವುದೇ ಬೆದರಿಕೆ ಅಥವಾ ಒತ್ತಡಕ್ಕೆ ಹೆದರುವ ಅಗತ್ಯವಿಲ್ಲ. ಜಿಲ್ಲಾ ಬಿಜೆಪಿ ಲೀಗಲ್ ಸೆಲ್ ಹಾಗೂ ಎಲ್ಲ ಮಂಡಲಗಳ ಕಾನೂನು ತಂಡ ಕಾರ್ಯಕರ್ತರ ಬೆಂಬಲಕ್ಕೆ ನಿಲ್ಲಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸುವ ಮೂಲಕ ಕಾರ್ಯಕರ್ತರಿಗೆ ಕಾನೂನು ರಕ್ಷಣೆ ಮತ್ತು ಅಗತ್ಯ ಸಹಕಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಬಿಜೆಪಿ ಲೀಗಲ್ ಸೆಲ್ ಸ್ಪಷ್ಟಪಡಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಲೀಗಲ್ ಸೆಲ್ ಸಂಚಾಲಕ ಶ್ರೀಧರ ಶೆಟ್ಟಿ ಪುಳಿಂಚ, ಸಹ ಸಂಚಾಲಕ ಪ್ರಮೋದ್ ಪೂಜಾರಿ ಕೆರ್ವಾಸೆ, ಸದಸ್ಯ ವೇಣುಕುಮಾರ್, ಮೂಡುಬಿದಿರೆ ಮಂಡಲದ ಸಹ ಸಂಚಾಲಕ ಶಶಿಕುಮಾರ್ ಮೂಲ್ಕಿ, ಸಮಿತಿ ಸದಸ್ಯ ರವೀಶ್ ಕಾಮತ್, ಮಂಗಳೂರು ಉತ್ತರ ಮಂಡಲದ ಸಮಿತಿ ಸದಸ್ಯ ರಾಘವೇಂದ್ರ ಟಿ.ಎನ್., ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಂಚಾಲಕ ಹಾಗೂ ವಕೀಲ ಅಕ್ಷಯ್ ಆಳ್ವ, ಮಂಗಳೂರು ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್., ಮಂಗಳೂರು ಉತ್ತರ ಮಂಡಲದ ಪ್ರಧಾನ ಕಾರ್ಯದರ್ಶಿ ರಣದೀಪ್ ಕಾಂಚನ್, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಶಾನವಾಝ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

