ಮಂಗಳೂರು: ನಂದಿಗುಡ್ಡೆಯಲ್ಲಿ ವಿದ್ಯುತ್ ಶವಗಾರ ನಿರ್ಮಾಣ, ಹೊಸ ಬಸ್ ಮಾರ್ಗಗಳ ಆರಂಭ, ಪಿಂಚಣಿ ಸೌಲಭ್ಯವಿಲ್ಲದ ಹಿರಿಯ ನಾಗರಿಕರಿಗೆ ಮಾಸಿಕ ₹5 ಸಾವಿರ ಗೌರವಧನ ಸೇರಿದಂತೆ ಎಂಟು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಮಾಜಿ ಕಾರ್ಪೊರೇಟರ್ ಕೆ. ಭಾಸ್ಕರ್ ರಾವ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಂದಿಗುಡ್ಡೆ ಮಸಣಭೂಮಿಯಲ್ಲಿ ವಿದ್ಯುತ್ ಶವಗಾರ ನಿರ್ಮಾಣಕ್ಕೆ ಈಗಾಗಲೇ ಮಂಜೂರಾತಿ ದೊರೆತಿದ್ದು, ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಹೀಗಾಗಿ, ಕಾಮಗಾರಿಯನ್ನು ವಿಳಂಬವಿಲ್ಲದೆ ಆರಂಭಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.

ಹೊಸ ಬಸ್ ಮಾರ್ಗಗಳಿಗೆ ಒತ್ತಾಯ
ಮಂಗಳಾದೇವಿಯಿಂದ ಎ.ಜೆ. ಆಸ್ಪತ್ರೆ, ಡೈರಿ ಫಾರ್ಮ್ ಹಾಗೂ ನೂತನ ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಜಲ್ಲಿಗುಡ್ಡೆಯವರೆಗೆ ಹೊಸ ಬಸ್ ಸಂಚಾರ ಆರಂಭಿಸಬೇಕು. ಮಂಗಳಾದೇವಿಯಿಂದ ಕೊಂಕಣಿ ಪ್ರದೇಶದವರೆಗೆ ಕುಡಿಯುವ ನೀರು ಮತ್ತು ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳಿರುವ ಬಸ್ ತಂಗುದಾಣಗಳನ್ನು ನಿರ್ಮಿಸಬೇಕು. ಮಂಗಳೂರಿನ ಪಾಸ್ಪೋರ್ಟ್ ಕಚೇರಿಯಲ್ಲಿಯೂ ಅಗತ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಹಿರಿಯ ನಾಗರಿಕರಿಗೆ ಮಾಸಿಕ ಗೌರವಧನ
70 ವರ್ಷ ಮೇಲ್ಪಟ್ಟ, ಯಾವುದೇ ಸರ್ಕಾರಿ ಪಿಂಚಣಿ ಪಡೆಯದ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ₹5 ಸಾವಿರ ಗೌರವಧನ ನೀಡುವುದರ ಜೊತೆಗೆ ಉಚಿತ ವೈದ್ಯಕೀಯ ನೆರವು ಒದಗಿಸಬೇಕು. ಇದರಿಂದ ಆರ್ಥಿಕ ಸಂಕಷ್ಟದಲ್ಲಿರುವ ಹಿರಿಯ ನಾಗರಿಕರಿಗೆ ನೆರವಾಗಲಿದೆ ಎಂದು ಅವರು ಹೇಳಿದರು.
ಇದಲ್ಲದೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಾಗರ ಪಂಚಮಿ, ಓಣಂ, ಅಷ್ಟಮಿ ಹಾಗೂ ತೆನೆ ಹಬ್ಬಗಳ ಸಂದರ್ಭದಲ್ಲಿ ಸರ್ಕಾರಿ ರಜೆ ಘೋಷಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರ ಪರಿಗಣಿಸಬೇಕು ಎಂದು ತಿಳಿಸಿದರು.
ದಕ್ಷಿಣ ಕನ್ನಡಕ್ಕೆ ಮಂಗಳೂರು ಜಿಲ್ಲೆ ಎಂದು ಮರುನಾಮಕರಣ
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡಬೇಕೆಂಬ ಬೇಡಿಕೆಯನ್ನು ಈಡೇರಿಸುವಂತೆ ಕೆ. ಭಾಸ್ಕರ್ ರಾವ್ ಒತ್ತಾಯಿಸಿದರು. ಮಂಗಳೂರು ಹೆಸರು ದೇಶ-ವಿದೇಶಗಳಲ್ಲಿ ವ್ಯಾಪಕವಾಗಿ ಪರಿಚಿತವಾಗಿದ್ದು, ಈ ಹೆಸರನ್ನು ಜಿಲ್ಲೆಯ ಅಧಿಕೃತ ಗುರುತಾಗಿ ಬಳಸುವುದರಿಂದ ಜಿಲ್ಲೆಯ ಖ್ಯಾತಿಗೆ ಮತ್ತಷ್ಟು ಬಲ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ಈ ಎಲ್ಲ ಬೇಡಿಕೆಗಳನ್ನು ರಾಜ್ಯ ಸರ್ಕಾರ ಆದ್ಯತೆಯ ಮೇರೆಗೆ ಪರಿಶೀಲಿಸಿ, ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಯಪ್ರಕಾಶ್, ಮೀನಾ ಟೆಲ್ಲಿಸ್, ಬಬಿತಾ ಡಿಸೋಜ ಹಾಗೂ ಅವಿತಾ ಉಪಸ್ಥಿತರಿದ್ದರು.

