ಮಂಗಳೂರು: ಮಂಗಳೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ನಗರದಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದ್ದು, ಸುಗಮ ಸಂಚಾರಕ್ಕಾಗಿ ಮಂಗಳೂರು ನಗರ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸಂಚಾರ ಸಲಹೆಗಳನ್ನು ಪ್ರಕಟಿಸಿದೆ.
ಪ್ರತಿದಿನ ಸಂಜೆ 4 ಗಂಟೆಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಗಣ್ಯರು ಹಾಗೂ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕೂಳೂರು ಫೆರಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿರುವುದರಿಂದ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ವಾಹನ ದಟ್ಟಣೆ ಸಾಧ್ಯತೆಯಿರುವ ರಸ್ತೆ
ಕಾರ್ಸ್ಟ್ರೀಟ್, ಬಾಲಾಜಿ ಜಂಕ್ಷನ್, ನ್ಯೂ ಚಿತ್ರಾ ಜಂಕ್ಷನ್, ಅಳಕೆ ಬ್ರಿಡ್ಜ್, ಕುದ್ರೋಳಿ ದೇವಸ್ಥಾನದ ದ್ವಾರ, ದುರ್ಗಾಮಹಲ್ ಜಂಕ್ಷನ್ ಹಾಗೂ ಮಣ್ಣಗುಡ್ಡೆ ಜಂಕ್ಷನ್ ಸಂಪರ್ಕಿಸುವ ಕೂಳೂರು ಫೆರಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.
ಪರ್ಯಾಯ ಮಾರ್ಗಗಳ ವಿವರ
ಕೊಟ್ಟಾರ ಚೌಕಿ ಕಡೆಯಿಂದ ಕಾರ್ಸ್ಟ್ರೀಟ್ ಕಡೆಗೆ ತೆರಳುವ ವಾಹನಗಳು ಲಾಲ್ಬಾಗ್–ಪಿ.ವಿ.ಎಸ್.–ನವಭಾರತ್ ಮಾರ್ಗವನ್ನು ಬಳಸಬೇಕು. ಕಾರ್ಸ್ಟ್ರೀಟ್ನಿಂದ ಕೂಳೂರು ಫೆರಿ ರಸ್ತೆಯ ಕಡೆಗೆ ಸಂಚರಿಸುವ ವಾಹನಗಳು ನವಭಾರತ್–ಪಿ.ವಿ.ಎಸ್. ಮಾರ್ಗವಾಗಿ ತೆರಳುವಂತೆ ಸೂಚಿಸಲಾಗಿದೆ.
ರಸ್ತೆ ಬದಿಯಲ್ಲಿ ವಾಹನ ನಿಲುಗಡೆಗೆ ನಿರ್ಬಂಧ
ಕೂಳೂರು ಫೆರಿ ರಸ್ತೆಯ ನ್ಯೂ ಚಿತ್ರಾ ಜಂಕ್ಷನ್ನಿಂದ ಲೇಡಿಹಿಲ್ವರೆಗೆ ಹಾಗೂ ಈ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಗೆ ಅವಕಾಶವಿರುವುದಿಲ್ಲ. ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗದಿತ ಪಾರ್ಕಿಂಗ್ ಸ್ಥಳಗಳಲ್ಲಿಯೇ ನಿಲುಗಡೆ ಮಾಡಬೇಕು. ಅಲ್ಲದೆ, ಸಂಚಾರ ನಿಯಂತ್ರಣಕ್ಕೆ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ದಸರಾ ಮಹೋತ್ಸವದ ಸಂದರ್ಭದಲ್ಲಿ ಸುಗಮ ವಾಹನ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.
ಸಂಚಾರ ನಿಯಮಗಳನ್ನು ಪಾಲಿಸಿ, ಸುರಕ್ಷಿತ ಪ್ರಯಾಣ ಮಾಡಿ.


