ಅಯೋಧ್ಯೆ (ಉ.ಪ್ರ.) : ಶ್ರೀವಿವೇಕಾನಂದ ಸೇವಾ ಸಮಿತಿ ವತಿಯಿಂದ ಉತ್ತರಪ್ರದೇಶದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಕ್ಷೇತ್ರದ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಧನ್ವಂತರಿ ಹೋಮ, ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಉಡುಪಿ ಪೇಜಾವರ ಅಧೋಕ್ಷಜಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಪಾಲ್ಗೊಂಡಿದ್ದರು.


ಕಾರ್ಯಕ್ರಮದ ನಂತರ ಕಾಶಿ ಜಗದ್ಗುರುಗಳು ರಾಮಜನ್ಮಭೂಮಿ ಮಂದಿರದ ಪರಿಸರವನ್ನು ಸಂಪೂರ್ಣ ವೀಕ್ಷಿಸಿದರು. ಈ ವೇಳೆ ಮಾತನಾಡಿದ ಕಾಶಿ ಜಗದ್ಗುರುಗಳು, ಶ್ರೀರಾಮ ಜನ್ಮಭೂಮಿ ಮಂದಿರದ ಪರಿಸರದಲ್ಲಿ ಭಾರತೀಯ ಧಾರ್ಮಿಕ ಪರಂಪರೆಯ ಚಿತ್ರಣವನ್ನು ಅನಾವರಣಗೊಳಿಸಲಾಗಿದೆ. ಸನಾತನ ಸಂಸ್ಕೃತಿಯನ್ನು ಬಿಂಬಿಸುವ ದೇಶದ ಸಂತ ಪರಂಪರೆ, ಆಚಾರ್ಯ ಪರಂಪರೆಯ ನೋಟ ಉತ್ತಮವಾಗಿ ಮೂಡಿ ಬಂದಿವೆ. ವಿಶೇಷವಾಗಿ ಅಗಸ್ತö್ಯ ದಧೀಚಿ, ವ್ಯಾಸ, ಸಾನಂದ ಮತ್ತು ದುರ್ವಾಸ ಮಹರ್ಷಿಗಳಿಗೆ ದಾರ್ಶನಿಕ ವಿಚಾರಗಳನ್ನು ಉಪದೇಶ ಮಾಡಿದ ವೀರಶೈವ ಧರ್ಮದ ಆದಿ ಜಗದ್ಗುರು ಪಂಚಾಚಾರ್ಯರ ಪಂಚಸೂತ್ರ ಪ್ರಸಂಗವನ್ನು ನಿರ್ಮಿಸುವುದರಿಂದ ಆಚಾರ್ಯ ಪರಂಪರೆಯ ನೋಟ ಪರಿಪೂರ್ಣಗೊಳ್ಳಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇದಕ್ಕೆ ಸ್ಪಂದಿಸಿದ ದೇವಾಲಯದ ಮುಖ್ಯಸ್ಥರಲ್ಲಿ ಓರ್ವರಾದ ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಕಾರ್ಯದರ್ಶಿ ಗೋಪಾಲ್ಜಿ, ಅವಶ್ಯವಾಗಿ ಪಂಚಸೂತ್ರ ಬೋಧನೆಯ ಪ್ರಕರಣವನ್ನು ಪಂಚಲೋಹದ ಬೃಹತ್ ಉಬ್ಬುಶಿಲ್ಪ ರೂಪದಲ್ಲಿ ನಿರ್ಮಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹಕ ಎನ್. ತಿಪ್ಪೇಸ್ವಾಮಿ, ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಲಿಂಗರಾಜ ಅಪ್ಪ, ಕಾಶಿ ಜ್ಞಾನ ಪೀಠದ ವ್ಯವಸ್ಥಾಪಕರುಗಳಾದ ಆರ್.ಕೆ.ಸ್ವಾಮಿ ಮತ್ತು ಶಿವಾನಂದ ಹಿರೇಮಠ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.


