ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಧಿಕೃತ ಚಾಲನೆ ದೊರೆತಿದೆ. 416ನೇ ನಾಡಹಬ್ಬದ ಉದ್ಘಾಟನೆಯನ್ನು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ನೆರವೇರಿಸಿದರು.
ಚಾಮುಂಡಿ ಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 11.50ರಿಂದ ಮಧ್ಯಾಹ್ನ 12.13ರವರೆಗಿನ ಶುಭ ಧನುರ್ ಲಗ್ನದಲ್ಲಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಮೂಲಕ ಮೈಸೂರು ನಗರದಲ್ಲಿ ನಾಡಹಬ್ಬದ ಸಂಭ್ರಮ ಕಳೆಗಟ್ಟಿದೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಪತ್ನಿ ಉಷಾ ಅವರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದರು. ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ ಮುಖ್ಯಮಂತ್ರಿ ಸಾಂಪ್ರದಾಯಿಕ ನಂದಿಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸಿ, ಜಾನಪದ ಕಲಾತಂಡಗಳ ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ ದೇವಸ್ಥಾನದತ್ತ ಸಾಗಿದರು. ದೇವಾಲಯದ ಮುಂಭಾಗದಲ್ಲಿ ನಾಲ್ಕು ಈಡುಗಾಯಿಗಳನ್ನು ಒಡೆಯುವ ಮೂಲಕ ಭಕ್ತಿ ಸಮರ್ಪಿಸಿದರು.

‘ದಸರಾ ಉದ್ಘಾಟಿಸುವಷ್ಟು ದೊಡ್ಡವನು ನಾನಲ್ಲ’
ದಸರಾ ಮಹೋತ್ಸವ ಉದ್ಘಾಟನೆಯ ಬಳಿಕ ಮಾತನಾಡಿದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ತಮ್ಮ ವಿನಮ್ರ ನುಡಿಗಳ ಮೂಲಕ ಗಮನ ಸೆಳೆದರು.
“ದಸರಾ ಉದ್ಘಾಟಿಸುವಷ್ಟು ದೊಡ್ಡವನು ನಾನಲ್ಲ. ನಾನು ಬಂದಿದ್ದು ಉದ್ಘಾಟಿಸಲು ಅಲ್ಲ, ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಾರ್ಥಿಸಲು ಬಂದಿದ್ದೇನೆ” ಎಂದು ಹೇಳಿದರು.

“ನಾನೊಬ್ಬ ಸನ್ಯಾಸಿ. ನಾನು ಪ್ರಾರ್ಥಿಸಬಹುದಷ್ಟೇ. ನಾಡಿಗಾಗಿ ಪ್ರಾರ್ಥನೆ ಸಲ್ಲಿಸಲಷ್ಟೇ ಬಂದೆ” ಎಂದು ತಿಳಿಸಿದ ಶ್ರೀಗಳು, ನಾಡಿನ ಜನರ ಒಳಿತಿಗಾಗಿ ಪ್ರಾರ್ಥಿಸುವುದೇ ತಮ್ಮ ಉದ್ದೇಶ ಎಂಬ ಸಂದೇಶ ನೀಡಿದರು.
ಮೈಸೂರು ದಸರಾ ನಾಡಿನ ಪರಂಪರೆ, ಸಂಸ್ಕೃತಿ ಮತ್ತು ಧಾರ್ಮಿಕ ವೈಭವವನ್ನು ಪ್ರತಿಬಿಂಬಿಸುವ ಪ್ರಮುಖ ಉತ್ಸವವಾಗಿದೆ. ದಸರಾ ಮಹೋತ್ಸವಕ್ಕೆ ಚಾಲನೆ ದೊರೆತ ಬೆನ್ನಲ್ಲೇ ಸಾಂಸ್ಕೃತಿಕ ನಗರಿಯಲ್ಲಿ ಉತ್ಸವದ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ.


