ಮಂಗಳೂರು: ರಾಜ್ಯದಲ್ಲಿ ಬರಗಾಲದಿಂದ ಕುಡಿಯುವ ನೀರು ಮತ್ತು ಮೇವಿನ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆಯನ್ನು ರದ್ದುಗೊಳಿಸಬೇಕು ಎಂದು ‘ಪರಿಸರಕ್ಕಾಗಿ ನಾವು’ ಸಂಘಟನೆಯ ರಾಜ್ಯಾಧ್ಯಕ್ಷ ಎ.ಟಿ. ರಾಮಸ್ವಾಮಿ ಮನವಿ ಮಾಡಿದರು.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯ 2,991 ಕೆರೆಗಳ ಪೈಕಿ 2,928 ಕೆರೆಗಳಲ್ಲಿ ನೀರಿಲ್ಲ. ಕಂಬಳದ ಕಣ ಸಿದ್ಧಪಡಿಸುವಾಗ 50ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಿರುವುದರಿಂದ ಪರಿಸರ ಮತ್ತು ಜೀವವೈವಿಧ್ಯಕ್ಕೆ ಹಾನಿಯಾಗಿದೆ ಎಂದು ಆರೋಪಿಸಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಮಾತನಾಡಿ, ಕಂಬಳದ ಬಗ್ಗೆ ಗೌರವವಿದ್ದರೂ ಬರಗಾಲದ ಸಂದರ್ಭದಲ್ಲಿ ಮೈಸೂರಿನಲ್ಲಿ ಆಯೋಜಿಸುವುದು ಸೂಕ್ತವಲ್ಲ. ಈ ಕುರಿತು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ದೊರೆತಿಲ್ಲ ಎಂದರು.
ಸಾಹಿತಿ ಹಾಗೂ ಪತ್ರಕರ್ತೆ ಕುಸುಮ ಆಯರಹಳ್ಳಿ ಮಾತನಾಡಿ, ಕುಡಿಯುವ ನೀರಿನ ಕೊರತೆಯ ನಡುವೆ ಕಂಬಳಕ್ಕಾಗಿ ಅಪಾರ ಪ್ರಮಾಣದ ನೀರು ಮತ್ತು ಸಾರ್ವಜನಿಕ ಹಣ ವ್ಯಯಿಸುವುದು ಸಮಂಜಸವಲ್ಲ. ಕೋಣಗಳ ಮಾಲಕರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಆಯೋಜನೆಯಿಂದ ಹಿಂದೆ ಸರಿಯಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬಡಗಲಪುರ ನಾಗೇಂದ್ರ, ಲೀಲಾ ಶಿವಕುಮಾರ್ ಹಾಗೂ ಗುರುಪ್ರಸಾದ್ ಕೆರಗೋಡು ಉಪಸ್ಥಿತರಿದ್ದರು.

