ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಪ್ರಸ್ತಾವನೆ ಮುಂದಿಟ್ಟಿದ್ದು, ಈ ಸಂಬಂಧ ಸಾರ್ವಜನಿಕರಿಂದ ಸಲಹೆ, ಅಭಿಪ್ರಾಯ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.
ರಾಜಕಾರಣಿಗಳು, ಸಾಮಾಜಿಕ ಚಿಂತಕರು, ವಿವಿಧ ಧರ್ಮಗಳ ಮುಖಂಡರು ಹಾಗೂ ಜಿಲ್ಲೆಯ ಸಂಘಟನೆಗಳಿಂದ ಬಂದ ಮನವಿಗಳನ್ನು ಪರಿಗಣಿಸಿ, ಸಾರ್ವಜನಿಕರ ಬೇಡಿಕೆ ಮತ್ತು ಆಡಳಿತಾತ್ಮಕ ಅನುಕೂಲತೆಯ ದೃಷ್ಟಿಯಿಂದ ಈ ಪ್ರಸ್ತಾವನೆ ರೂಪಿಸಲಾಗಿದೆ ಎಂದು ತಿಳಿಸಲಾಗಿದೆ.
ರಾಜ್ಯ ಸರ್ಕಾರದ ಕಂದಾಯ ಇಲಾಖೆಯು 2026ರ ಅಕ್ಟೋಬರ್ 1ರಂದು ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಸೆಕ್ಷನ್ 4(4A) ಹಾಗೂ ಸಂಬಂಧಿತ ಮಾರ್ಗಸೂಚಿಗಳ ಅನ್ವಯ ಮರುನಾಮಕರಣ ಪ್ರಕ್ರಿಯೆ ಕೈಗೊಳ್ಳಲು ಉದ್ದೇಶಿಸಿದೆ.
30 ದಿನಗಳ ಕಾಲಾವಕಾಶ ಅಧಿಸೂಚನೆಯು ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 30 ದಿನಗಳೊಳಗೆ ಸಾರ್ವಜನಿಕರು ತಮ್ಮ ಅಭಿಪ್ರಾಯ, ಸಲಹೆ ಹಾಗೂ ಆಕ್ಷೇಪಣೆಗಳನ್ನು ಲಿಖಿತವಾಗಿ ಅಥವಾ ಇ-ಮೇಲ್ ಮೂಲಕ ಸಲ್ಲಿಸಬಹುದಾಗಿದೆ. ಸ್ವೀಕೃತವಾಗುವ ಅಭಿಪ್ರಾಯಗಳನ್ನು ಪರಿಶೀಲಿಸಿದ ಬಳಿಕ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಮುಖ್ಯಮಂತ್ರಿ ಸಚಿವಾಲಯದ cm.kar@nic.in, ಕಂದಾಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು. ಜಿಲ್ಲಾಧಿಕಾರಿಗಳ ಕಚೇರಿಯ ಇ-ಮೇಲ್ ವಿಳಾಸ dc.mnglr@gmail.com ಆಗಿದೆ.
ಪ್ರಸ್ತಾವನೆಯಂತೆ, ಜಿಲ್ಲೆಯ ಹೊಸ ಹೆಸರು ಕನ್ನಡದಲ್ಲಿ ‘ಮಂಗಳೂರು ಜಿಲ್ಲೆ’, ಇಂಗ್ಲಿಷ್ನಲ್ಲಿ ‘MANGALURU DISTRICT’ ಹಾಗೂ ದೇವನಾಗರಿ ಲಿಪಿಯಲ್ಲಿ ‘मंगलुरु ज़िला’ ಎಂದು ಇರಲಿದೆ. ಸಾರ್ವಜನಿಕರಿಂದ ವ್ಯಕ್ತವಾಗುವ ಅಭಿಪ್ರಾಯಗಳ ಆಧಾರದ ಮೇಲೆ ಮರುನಾಮಕರಣ ಪ್ರಸ್ತಾವನೆ ಕುರಿತು ಮುಂದಿನ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.


