ಬೆಳ್ತಂಗಡಿ: ಖಾಸಗಿ ಕ್ಲಿನಿಕ್ಗೆ ಬೆಂಕಿ ಹಚ್ಚಿ ಔಷಧಗಳು ಹಾಗೂ ವೈದ್ಯಕೀಯ ಉಪಕರಣಗಳನ್ನು ಸುಟ್ಟುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೆಳ್ತಂಗಡಿ ನಡ ಗ್ರಾಮದ ಡಾ.ಪ್ರದೀಪ್ ಎ. (51) ಅವರು ಬೆಳ್ತಂಗಡಿ ತಾಲೂಕಿನ ನಾವೂರು ಎಂಬಲ್ಲಿ ನಡೆಸುತ್ತಿದ್ದ ಕ್ಲಿನಿಕ್ಗೆ ಅಕ್ಟೋಬರ್ 6, 2026ರಂದು ರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು ಎನ್ನಲಾಗಿದೆ. ಘಟನೆಯಿಂದ ಕ್ಲಿನಿಕ್ನಲ್ಲಿದ್ದ ಔಷಧಗಳು, ವೈದ್ಯಕೀಯ ಉಪಕರಣಗಳು ಸೇರಿದಂತೆ ಅಂದಾಜು ₹2ರಿಂದ ₹3 ಲಕ್ಷ ಮೌಲ್ಯದ ಸೊತ್ತುಗಳು ಸುಟ್ಟುಹೋಗಿದ್ದವು.
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 112/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) 2023ರ ಕಲಂ 326(f), 326(g) ಮತ್ತು 324(5)ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಬೆಳ್ತಂಗಡಿ ಪೊಲೀಸರು, ನಾವೂರು ನಿವಾಸಿಗಳಾದ ರವಿಕುಮಾರ್ (31), ಸುರೇಶ್ ಪಿ.ಎನ್. (44) ಮತ್ತು ದಿನೇಶ್ ಪ್ರಭು (51) ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮುಂದಿನ ಕಾನೂನು ಪ್ರಕ್ರಿಯೆಗಾಗಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿದುಬಂದಿದೆ.

